ಹುಣಸೂರು: ರಾಷ್ಟ್ರೀಯ ಹುಲಿ ಗಣತಿ-2018ರ ಕಾರ್ಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಜನವರಿ 17ರ ವರೆಗೆ ರಾಜ್ಯದ ಎಲ್ಲ ವನ್ಯಜೀವಿ ತಾಣ ಹಾಗೂ ಜನವರಿ 15 ರಿಂದ ಫೆಬ್ರವರಿ 3 ರವರೆಗೆ ಪ್ರಾದೇಶಿಕ ವಿಭಾಗಗಳಲ್ಲಿ ಗಣತಿ ಕಾರ್ಯ ನಡೆಯಲಿದೆ.
ಹುಲಿ ಗಣತಿಯಿಂದಾಗಿ ಉದ್ಯಾನದಲ್ಲಿನ ವನ್ಯಜೀವಿಗಳ ಆವಾಸ ಸ್ಥಾನಗಳ ಸ್ಥಿತಿಗತಿ ಬಗ್ಗೆ, ಮಾಂಸಹಾರಿ-ಸಸ್ಯಹಾರಿ ಪ್ರಾಣಿಗಳ ಆಹಾರದ ಸಮತೋಲನ ಸ್ಥಿತಿ, ಅವುಗಳ ಸಂರಕ್ಷಣೆ ಮತ್ತು ಉದ್ಯಾನದ ನಿರ್ವಹಣೆಗೆ ಹುಲಿ ಗಣತಿ ಅನುಕೂಲವಾಗಲಿದೆ.
68 ಬೀಟ್-272 ಸಿಬ್ಬಂದಿ: ನಾಗರಹೊಳೆ ಉದ್ಯಾನದ 8 ವಲಯಗಳಿಂದ 68 ಬೀಟ್(ತಂಡ)ಗಳನ್ನು ರಚಿಸಲಾಗಿದ್ದು, ತಂಡದಲ್ಲಿ ಒಬ್ಬ ಗಾರ್ಡ್ ಸೇರಿ ನಾಲ್ಕು ಮಂದಿ ಇರುತ್ತಾರೆ. ಈಗಾಗಲೇ ಗುರುತಿಸಿರುವ 2 ಕಿ.ಮೀ. ಟ್ರಾÂಜಾಕ್ಟ್ಲೆನ್‌ನಲ್ಲಿ ಗಣತಿಕಾರ್ಯ ನಡೆಸಲಿದ್ದು, ಪ್ರತಿದಿನದ ಮಾಹಿತಿಯನ್ನು ನಿಗದಿತ ಫಾರಂಗಳಲ್ಲಿ ದಾಖಲಿಸಲಾಗುವುದು. ಮಾಂಸಹಾರಿ ಪ್ರಾಣಿಗಳಾದ ಹುಲಿ, ಚಿರತೆ ಮತ್ತಿತರ ಪ್ರಾಣಿಗಳ ಹೆಜ್ಜೆ, ಮಲದ ಮೂಲಕ ಹಾಗೂ ಸಸ್ಯಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆ, ಜಿಂಕೆ, ಮೊಲ, ಕಾಡುಕುರಿ, ಮುಳ್ಳುಹಂದಿ, ಕಾಡುಹಂದಿ ಸೇರಿ ಸಸ್ಯಹಾರಿ ಪ್ರಾಣಿಗಳ ಹಿಕ್ಕೆ, ಹೆಜ್ಜೆ ಗುರುತು ಪತ್ತೆ ಹಚ್ಚುವುದು ಮತ್ತು ಅವುಗಳಿಗೆ ಸಿಗುವ ಆಹಾರದ ಬಗ್ಗೆ ದಿಕ್ಸೂಚಿ ಬಳಸಿಕೊಂಡು ಟ್ರ್ಯಾಂಜಾಕ್ಟ್ ಲೆನ್ ಮೂಲಕ ಗುರುತಿಸಿ, ನಿಗದಿತ ಪ್ರತ್ಯೇಕ ಫಾರಂಗಳಲ್ಲಿ ದಾಖಲು ಮಾಡಲಾಗುವುದು. ಕಾಡಂಚಿನ ಗ್ರಾಮಗಳ ಸಾಕು ಪ್ರಾಣಿಗಳಿಂದ ಕಾಡಿನ ಮೇಲೆ ಒತ್ತಡವಿದೆಯೇ ಎಂಬುದನ್ನು ಸಹ ದಾಖಲಿಸಬೇಕು.
ಹಂತ ಹಂತವಾಗಿ ಗಣತಿ: ಗಣತಿ ಕಾರ್ಯದಲ್ಲಿ ಈ ಹಿಂದೆ ಆನೆ ಗಣತಿ ಸಂದರ್ಭದಲ್ಲಿ ನಿರ್ಮಿಸಿರುವ ಟ್ರ್ಯಾಂಜಾಕ್ಟ್ ಲೆನ್‌ಅನ್ನೇ ಈ ಗಣತಿಗೂ ಬಳಸಲಾಗುತ್ತಿದೆ. ಎರಡು ದಿನ ಗಣತಿಯ ಸಿದ್ಧತೆ, ಮೂರು ದಿನ ಮಾಂಸಹಾರಿ ಪ್ರಾಣಿ, ನಂತರದ ಮೂರುದಿನ ಸಸ್ಯಹಾರಿ ಪ್ರಾಣಿಗಳ ಮತ್ತು ಸಸ್ಯ ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಗಣತಿ ಕಾರ್ಯದ ಬಗ್ಗೆ ಪ್ರಾತ್ಯಕ್ಷತೆ ಮೂಲಕ ನಾಗರಹೊಳೆ ಎಸಿಎಫ್ ಅಂಟೋನಿಪೌಲ್, ವೀರನಹೊಸಹಳ್ಳಿ ವಲಯದ ಆರ್‌ಎಫ್ಒ ಮಧುಸೂಧನ್, ಡಿಆರ್‌ಎಫ್ಒ ನವೀನ್, ಅರಣ್ಯ ರಕ್ಷಕ ಪ್ರವೀಣ್ ಹಾಗೂ ನ್ಯಾಚುರಲಿಸ್ಟ್ ಗೋಪಿ ತರಬೇತಿ ನೀಡಿದರು.
ವಲಯ ಅರಣ್ಯಾಧಿಕಾರಿಗಳಾದ ಶಿವರಾಂ, ಕಿರಣ್‌ಕುಮಾರ್, ಅರವಿಂದ್, ಸುಬ್ರಹ್ಮಣ್ಯ, ಸುರೇಂದ್ರ, ಶರಣಬಸಪ್ಪ ಸೇರಿ 250ಕ್ಕೂ ಹೆಚ್ಚು ಸಿಬ್ಬಂದಿ ತರಬೇತಿಯಲ್ಲಿ ಭಾಗವಹಿಸಿದ್ದರು. ನಾಗರಹೊಳೆ ಉದ್ಯಾನ 643 ಚದರ ಕಿ.ಮೀ.ಇದ್ದು, 8 ವಲಯಗಳಿವೆ. ಉದ್ಯಾನದ ಕಡಿಮೆ ಪ್ರದೇಶದಲ್ಲಿ ಹುಲಿಗಳ ಸಾಂದ್ರತೆ ಹೆಚ್ಚಿರುವುದರಿಂದ ಈ ಉದ್ಯಾನ ಮಹತ್ವ ಪಡೆದಿದೆ. ಈಗಾಗಲೇ ಹುಲಿಗಣತಿಗೆ ಸಕಲ ಸಿದ್ಧತೆಯಾಗಿದ್ದು, ತರಬೇತಿ ಮೂಲಕ ಸಿಬ್ಬಂದಿಯನ್ನು ಅಣಿಗೊಳಿಸಲಾಗಿದೆ ಎಂದು ಎಸಿಎಫ್ ಪ್ರಸನ್ನಕುಮಾರ್ “ಉದಯವಾಣಿಗೆ’ ಮಾಹಿತಿ ನೀಡಿದರು.