ಹೊಸದಿಲ್ಲಿ : ನ್ಯಾಶನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ (ನೀಟ್), ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಶನ್ (ಜೆಇಇ) ಮತ್ತು ನ್ಯಾಶನಲ್ ಎಲಿಜಿಬಿಲಿಟಿ ಟೆಸ್ಟ್ (ನೆಟ್) ಇವುಗಳನ್ನು ಇನ್ನು ಮುಂದೆ ನ್ಯಾಶನಲ್ ಟೆಸ್ಟಿಂಗ್ ಏಜನ್ಸಿ (NTA) ನಡೆಸುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದಿಲ್ಲಿ ಹೇಳಿದರು. ಈ ವರೆಗೆ ಈ ಪರೀಕ್ಷೆಗಳನ್ನು ಸಿಬಿಎಸ್‌ಇ ನಡೆಸುತ್ತಿತ್ತು.
ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಬಾರಿ ನೀಟ್ ಎದುರಿಸಬಹುದು; ಇವುಗಳಲ್ಲಿನ ಅತ್ಯುತ್ತಮ ಅಂಕಗಳನ್ನು ಪ್ರವೇಶಕ್ಕೆ ಪರಿಗಣಿಸಲಾಗುವುದು. ನೀಟ್ ಅನ್ನು ಪ್ರತೀ ವರ್ಷ ಫೆಬ್ರವರಿ ಮತ್ತು ಮೇ ತಿಂಗಳಲ್ಲಿ ನಡೆಸಲಾಗುವುದು ಎಂದು ಜಾವಡೇಕರ್ ಹೇಳಿದರು.
ಕಾಲೇಜು ಮತ್ತು ವಿವಿ ಮಟ್ಟದ ಉಪನ್ಯಾಸಕರ ಹುದ್ದೆಯ ನೆಟ್ ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ನಡೆಸಲಾಗುವುದು. ಜೆಇಇ ಮೇನ್ಸ್ ವರ್ಷಂಪ್ರತಿ ಜನವರಿ ಮತ್ತು ಎಪ್ರಿಲ್ ನಲ್ಲಿ ನಡೆಸಲಾಗುವುದು ಎಂದು ಜಾವಡೇಕರ್ ತಿಳಿಸಿದರು.
ಎನ್‌ಟಿಎ ಪರೀಕ್ಷೆಗಳಿಗಾಗಿ ಆಗಸ್ಟ್ ಅಂತ್ಯದಿಂದ ಕಂಪ್ಯೂಟರ್ ಕೇಂದ್ರಗಳಿಗೆ ಹೋಗುವ ಅವಕಾಶ ವಿದ್ಯಾರ್ಥಿಗಳಿಗೆ ಇರುತ್ತದೆ. ಪರೀಕ್ಷೆಯ ಸಿಲೆಬಸ್, ಪ್ರಶ್ನೆ ವಿಧಾನ, ಭಾಷೆ ಮತ್ತು ಪರೀಕ್ಷಾ ಶುಲ್ಕ ಇವುಗಳನ್ನು ಬದಲಿಸಲಾಗುವುದಿಲ್ಲ ಎಂದು ಜಾವಡೇಕರ್ ಹೇಳಿದರು.
ಎನ್‌ಟಿಎ ನಡೆಸುವ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಸಚಿವಾಲಯದ ವೆಬ್ ಸೈಟಿನಲ್ಲಿ ಹಾಕಲಾಗುವುದು ಎಂದವರು ಹೇಳಿದರು.