Advertisement

ರಾಷ್ಟ್ರೀಯ ಮುಷ್ಕರ : ಕಾಸರಗೋಡಿನಲ್ಲಿ ಜನಜೀವನ ಅಸ್ತವ್ಯಸ್ತ

08:28 PM Jan 08, 2020 | mahesh |

ಕಾಸರಗೋಡು: ಕೇಂದ್ರ ಸರಕಾರದ ನೀತಿಯನ್ನು ಪ್ರತಿಭಟಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಸಮಿತಿ ಕರೆ ನೀಡಿದ ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

Advertisement

ಮುಷ್ಕರದ ನಿಮಿತ್ತ ಬಸ್‌ ಸಂಚಾರ ಪೂರ್ಣವಾಗಿ ನಿಲುಗಡೆಗೊಂಡಿತು. ಬಿಎಂಎಸ್‌ ಬೆಂಬಲಿಗರು ಎಂದಿನಂತೆ ಆಟೋ ರಿಕ್ಷಾ ಸೇವೆ ನಡೆಸಿದ್ದು, ಖಾಸಗಿ ವಾಹನಗಳು ರಸ್ತೆಯಲ್ಲಿ ಸಂಚರಿಸಿತು. ಸರಕು ಲಾರಿಗಳನ್ನು ಹಾಗು ವಾಹನಗಳನ್ನು ತಡೆಯಲಾಯಿತು. ಮುಷ್ಕರ ಬೆಂಬಲಿಗರು ನಗರದಲ್ಲಿ ಮೆರವಣಿಗೆ ನಡೆಸಿದರು.

ಜ. 7ರಂದು ಮಧ್ಯರಾತ್ರಿಯಿಂದ ಆರಂಭಗೊಂಡು ಜ. 8ರಂದು ಮಧ್ಯ ರಾತ್ರಿಯ ವರೆಗೆ 24 ಗಂಟೆಗಳ ಭಾರತ್‌ ಬಂದ್‌ ನಡೆಯಿತು. ಸಾರ್ವತ್ರಿಕ ಮುಷ್ಕರ ದಿಂದ ಅತ್ಯಗತ್ಯ ಸೇವೆ ಗಳಾದ ಆಸ್ಪತ್ರೆ, ಹಾಲು, ಪತ್ರಿಕೆ, ಪ್ರವಾಸಿ ಕೇಂದ್ರಗಳು, ಶಬರಿಮಲೆ ತೀರ್ಥಾಟನೆ ಮೊದಲಾದವುಗಳನ್ನು ಹೊರತುಪಡಿಸಲಾಗಿತ್ತು. ಕಾರ್ಮಿಕರ ಕನಿಷ್ಠ ವೇತನ 21 ಸಾವಿರ ರೂ.ಗೇರಿಸಬೇಕು, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದಿಂದ ಹಿಂದೆ ಸರಿಯಬೇಕು, ಕಾರ್ಮಿಕ ನೀತಿ ತಿದ್ದುಪಡಿ ಮಾಡಕೂಡದು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಸಮಿತಿ ಭಾರತ್‌ ಬಂದ್‌ಗೆ ಕರೆ ನೀಡಿತ್ತು.

ಬಿ.ಎಂ.ಎಸ್‌. ಸಂಘಟನೆ ಹೊರತುಪಡಿಸಿ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು, ಕೇಂದ್ರ, ರಾಜ್ಯ ಸರಕಾರಿ ನೌಕರರು, ಬ್ಯಾಂಕ್‌, ಇನ್ಶೂರೆನ್ಸ್‌, ಬಿಎಸ್‌ಎನ್‌ಎಲ್‌ ನೌಕರರು ಹಾಗೂ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದವು.

ಜಿಲ್ಲೆಯ ಸರಕಾರಿ ಕಚೇರಿಗಳಲ್ಲಿ ಹಾಜ ರಾತಿ ಅತ್ಯಂತ ಕಡಿಮೆಯಿದ್ದು, ಇದರಿಂದಾಗಿ ಕಚೇರಿ ನಿರ್ವಹಣೆ ಸಂಪೂರ್ಣ ನಿಲುಗಡೆ ಗೊಂಡಿತು. ಬ್ಯಾಂಕ್‌ಗಳು ಬೆಳಗ್ಗೆ ತೆರೆದಿದ್ದರೂ ಆ ಬಳಿಕ ಮುಚ್ಚಲಾಯಿತು. ಶಿಕ್ಷಣ ಕ್ಷೇತ್ರ ಸಂಪೂರ್ಣ ನಿಲುಗಡೆಗೊಂಡಿತು.

Advertisement

ಕಾಸರಗೋಡು ನಗರದಲ್ಲಿ ಮುಷ್ಕರ ಬೆಂಬಲಿಸಿ ನಡೆಸಿದ ಮೆರವಣಿಗೆಗೆ ವಿವಿಧ ಕಾರ್ಮಿಕ ಸಂಘಟನೆಗಳ ಟಿ.ಕೆ. ರಾಜನ್‌, ಸಿ.ಎಚ್‌. ಕುಂಞಂಬು, ಕೆ. ಭಾಸ್ಕರನ್‌, ಕೆ. ರವೀಂದ್ರನ್‌, ಪಿ. ಜಾನಕಿ (ಸಿಐಟಿಯು), ಸುಬೈರ್‌ ಪಡು³, ಸಿ.ಎಂ.ಎ. ಜಲೀಲ್‌, ಹನೀಫ್‌ ಕಡಪ್ಪುರಂ (ಐಎಲ್‌ಯು), ಕೆ.ಪಿ. ಮುಹಮ್ಮದ್‌ ಅಶ್ರಫ್‌, ಸುಬೈರ್‌, ಮುತ್ತಲೀಬ್‌ ಪಾರೆಕಟ್ಟೆ, ಸಯ್ಯಿàದ್‌, ಸಾಬೀರ್‌ ತುರ್ತಿ(ಎಸ್‌ಟಿಯು), ಟಿ. ಕೃಷ್ಣನ್‌, ಮಣಿಕಂಠನ್‌ (ಎಐಟಿಯುಸಿ), ಕರಿವೆಳ್ಳೂರು ವಿಜಯನ್‌ (ಯುಟಿಯುಸಿ), ಸಿ.ಜಿ. ಜೋನಿ, ಕೆ. ಜಗದೀಶ್‌, ಬಾಲಕೃಷ್ಣನ್‌, ಉಮೇಶ್‌ ಅಣಂಗೂರು, ಇ.ಹರೀಂದ್ರನ್‌, ಅಬೂಬಕ್ಕರ್‌ ತುರ್ತಿ, ಪಿ.ಕೆ.ವಿಜಯನ್‌(ಐಎನ್‌ಟಿಯುಸಿ), ಮುಹಮ್ಮದ್‌ ಹಾಶೀಂ, ಪದ್ಮೇಶ್‌, ಟಿ.ಎ. ಶಾಫಿ (ಕೆ.ಯು.ಡಬ್ಲ್ಯೂ) ಮೊದಲಾದವರು ನೇತೃತ್ವ ನೀಡಿದರು. ಹೊಸ ಬಸ್‌ ನಿಲ್ದಾಣ ಪರಿಸರದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next