Advertisement

ರಾಷ್ಟ್ರೀಯ ಕ್ರೀಡಾದಿನ: ಹಾಕಿರತ್ನ “ಧ್ಯಾನ್‌ಚಂದ್”‌ಗೆ ಒಲಿಯಲಿ ‘ಭಾರತ ರತ್ನ’

06:37 PM Aug 28, 2020 | mahesh |

ಹೊಸದಿಲ್ಲಿ: ಶನಿವಾರ ರಾಷ್ಟ್ರೀಯ ಕ್ರೀಡಾದಿನ. ಭಾರತೀಯ ಹಾಕಿ ದಂತಕತೆ, ಮೇಜರ್‌ ಧ್ಯಾನ್‌ಚಂದ್‌ ಅವರ 115ನೇ ಜನ್ಮದಿನದ ಸಂಭ್ರಮ. ಸಹಜವಾಗಿಯೇ ದೇಶದ ಕ್ರೀಡಾಪಟುಗಳು ಈ ದಿನವನ್ನು ಬಹಳ ಕಾತರದಿಂದ ನಿರೀಕ್ಷಿಸುತ್ತಾರೆ. ಭಾರತದ ಕ್ರೀಡಾ ಸಾಧಕರಿಗೆ ಪರಮೋಚ್ಚ ಕ್ರೀಡಾರತ್ನ ಸೇರಿದಂತೆ, ಅರ್ಜುನ, ದ್ರೋಣಾಚಾರ್ಯ ಮೊದಲಾದ ಪ್ರಶಸ್ತಿಗಳನ್ನು ಪ್ರದಾನ ಮಾಡುವ ದಿನವಿದು. 2002ರಿಂದ ಜೀವಮಾನ ಸಾಧನೆಗಾಗಿ ಸ್ವತಃ ಧ್ಯಾನ್‌ಚಂದ್‌ ಹೆಸರಲ್ಲೂ ಪ್ರಶಸ್ತಿಯೊಂದನ್ನು ನೀಡಲಾಗುತ್ತಿದೆ. ಇದು 5 ಲಕ್ಷ ರೂ. ಗೌರವಧನವನ್ನು ಹೊಂದಿದೆ.

Advertisement

ಅವಿಸ್ಮರಣೀಯ ಛಾಪು
ಭಾರತ ಹಾಗೂ ವಿಶ್ವ ಹಾಕಿಯಲ್ಲಿ ಧ್ಯಾನ್‌ಚಂದ್‌ ಮೂಡಿಸಿದ ಛಾಪು ಅವಿಸ್ಮರಣೀಯ. ಅದು ಕೇವಲ ಹಾಕಿಪಟುಗಳಿಗಷ್ಟೇ ಅಲ್ಲ, ಎಲ್ಲ ಕ್ರೀಡಾಪಟುಗಳಿಗೂ ಸ್ಫೂರ್ತಿ. ಕ್ರಿಕೆಟಿಗೆ ಬ್ರಾಡ್‌ಮನ್‌, ತೆಂಡುಲ್ಕರ್‌ ಹೇಗೋ, ಹಾಕಿಗೆ ಧ್ಯಾನ್‌ಚಂದ್‌. ಅವರಿಲ್ಲದೆ ಹಾಕಿ ಪರಿಪೂರ್ಣವಾಗದು. ಒಲಿಂಪಿಕ್ಸ್‌ ಹಾಕಿ ಎಂದೊಡನೆ ಅಲ್ಲಿ ಧ್ಯಾನ್‌ಚಂದ್‌ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಭಾರತದ 3 ಒಲಿಂಪಿಕ್‌ ಚಿನ್ನದ ಬೇಟೆಯ ವೇಳೆ ಧ್ಯಾನ್‌ಚಂದ್‌ ತಂಡದಲ್ಲಿದ್ದರು (1928, 1932, 1936). 1964ರ ತನಕ ಸತತ 8 ಒಲಿಂಪಿಕ್‌ ಚಿನ್ನವನ್ನು ಬೇಟೆಯಾಡಲು ಭಾರತಕ್ಕೆ ಧ್ಯಾನ್‌ಚಂದ್‌ ಅವರೇ ಮುಹೂರ್ತವಿರಿಸಿದ್ದನ್ನು ಮರೆಯುವಂತಿಲ್ಲ.

1926ರಿಂದ 1949ರ ತನಕ ಭಾರತೀಯ ಹಾಕಿ ಸಾರ್ವಭೌಮನಾಗಿ ಮೆರೆದ ಧ್ಯಾನ್‌ಚಂದ್‌ 185 ಪಂದ್ಯಗಳಿಂದ 570 ಗೋಲು ಸಿಡಿಸಿದ ಸಾಹಸಿ. ಅವರ ಜೀವನಚರಿತ್ರೆ “ಗೋಲ್‌’ ಕ್ರೀಡಾಪ್ರಿಯರೆಲ್ಲ ತಪ್ಪದೇ ಓದಬೇಕಾದ ಪುಸ್ತಕ. ಭಾರತ ಸರಕಾರ 1956ರಲ್ಲಿ ಧ್ಯಾನ್‌ಚಂದ್‌ಗೆ ಪದ್ಮಭೂಷಣ ನೀಡಿ ಗೌರವ ಸಲ್ಲಿಸಿತ್ತು. ಆದರೂ ಧ್ಯಾನ್‌ಚಂದ್‌ ಅವರನ್ನು ಗೌರವಿಸುವ ವಿಷಯದಲ್ಲಿ ಒಂದು ಕೊರತೆ ಕಾಡುತ್ತಿದೆ. ಅದೆಂದರೆ, ಹಾಕಿ ಮಾಂತ್ರಿಕನಿಗೆ ಪ್ರತಿಷ್ಠಿತ ಭಾರತರತ್ನ ಪ್ರಶಸ್ತಿ ಇನ್ನೂ ಒಲಿಯದಿರುವುದು. ಅವರ ಜನ್ಮದಿನದ ಸಂದರ್ಭದಲ್ಲಿ ಮತ್ತೆ ಇಂಥದೊಂದು ಧ್ವನಿ ಕೇಳಿಬಂದಿದೆ.

ಧ್ಯಾನ್‌ಚಂದ್‌ ದೇವರು
“ನಮ್ಮೆಲ್ಲರ ಪಾಲಿಗೆ ಧ್ಯಾನ್‌ಚಂದ್‌ ದೇವರಾಗಿದ್ದಾರೆ. ಅಂಥ ಅಮೋಘ ಆಟಗಾರ ಹಾಗೂ ಶ್ರೇಷ್ಠ ವ್ಯಕ್ತಿಯನ್ನು ಪಡೆಯುವುದು ಕಷ್ಟ. ಅವರೋರ್ವ ಪರಿಪೂರ್ಣ ಆಟಗಾರ. ಅವರು ಭಾರತರತ್ನಕ್ಕೆ ಅತ್ಯಂತ ಯೋಗ್ಯರು’ ಎಂಬುದಾಗಿ ಮಾಜಿ ಹಾಕಿಪಟು, 83 ವರ್ಷದ ಗುರುಬಕ್ಸ್ ಸಿಂಗ್‌ ಹೇಳಿದ್ದಾರೆ. 1980ರ ಬಳಿಕ ದೂರವಾದ ಒಲಿಂಪಿಕ್ಸ್‌ ಚಿನ್ನವನ್ನು ನಾವು ಮರಳಿ ಸಂಪಾದಿಸಬೇಕು ಎಂಬ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.

ಧ್ಯಾನ್‌ಚಂದ್‌ ಜತೆ ಕಳೆದ ನೆನಪುಗಳನ್ನು ಮೆಲುಕು ಹಾಕಿದ ಹರ್ಬಿಂದರ್‌ ಸಿಂಗ್‌, “ದಾದಾ ನಮ್ಮೆಲ್ಲರ ಪಾಲಿನ ಹೆಮ್ಮೆ. 100 ಮೀ.ನಲ್ಲಿ ನಾನು 10.8 ಸೆಕೆಂಡ್‌ಗಳ ಟೈಮಿಂಗ್ಸ್‌ ಹೊಂದಿದ್ದೆ. ನನ್ನ ವೇಗವನ್ನು ಗುರುತಿಸಿದ ದಾದಾ, ಚೆಂಡನ್ನು ಯಾವತ್ತೂ ಮುಂಚೂಣಿಯಲ್ಲಿ ಹಿಡಿದಿಟ್ಟು ನಿಯಂತ್ರಣ ಸಾಧಿಸಬೇಕು ಎಂಬ ಪಾಠ ಮಾಡಿದ್ದರು. ಅವರು ಅಪ್ಪಟ ಭಾರತ ರತ್ನ’ ಎಂದಿದ್ದಾರೆ.

Advertisement

ಆ. 15ರಂದೇ ಅರಳಿದ ಧ್ವಜ!
ಬ್ರಿಟಿಷ್‌ ದಬ್ಟಾಳಿಕೆಯನ್ನು ಕಡೆಗಣಿಸಿ 1936ರ ಬರ್ಲಿನ್‌ ಒಲಿಂಪಿಕ್ಸ್‌ ವೇಳೆ ಭಾರತದ ಧ್ವಜವನ್ನು ಸೂಟ್‌ಕೇಸ್‌ನಲ್ಲಿ ಹಾಕಿಕೊಂಡು ಹೋದ ದೇಶಪ್ರೇಮಿ ಧ್ಯಾನ್‌ಚಂದ್‌. ಭಾರತ ಅಂದಿನ ಫೈನಲ್‌ನಲ್ಲಿ ಹಿಟ್ಲರ್‌ ಸಮ್ಮುಖದಲ್ಲೇ ಜರ್ಮನಿಯನ್ನು 8-1ರಿಂದ ಕೆಡವಿತ್ತು. ಮಳೆಯಿಂದ ಅಂಗಳ ಜಾರುತ್ತಿದ್ದ ಕಾರಣ, ಶೂ ಕಳಚಿಟ್ಟು ಬರಿಗಾಲಲ್ಲಿ ಆಡಿದ ಧ್ಯಾನ್‌ಚಂದ್‌ 3 ಗೋಲು ಸಿಡಿಸಿದ್ದನ್ನು ಮರೆಯಲಾಗದು. ಚಿನ್ನ ಗೆದ್ದ ಬಳಿಕ ಕ್ರೀಡಾಗ್ರಾಮದಲ್ಲಿ ಅವರು ಭಾರತದ ಧ್ವಜವನ್ನು ಹಾರಿಸಿದ್ದರು. ಕಾಕತಾಳೀಯವೆಂದರೆ, ಅಂದು ಆಗಸ್ಟ್‌ 15 ಆಗಿತ್ತು!

Advertisement

Udayavani is now on Telegram. Click here to join our channel and stay updated with the latest news.

Next