Advertisement
ಕೋವಿಡ್-19 ಮಾರ್ಗಸೂಚಿಯಂತೆ ಈ ಬಾರಿಯ ಸಮಾರಂಭ ಆನ್‌ಲೈನ್ ಮೂಲಕ ನಡೆಯಲಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಉಪಸ್ಥಿತರಿದ್ದು, ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಪ್ರಶಸ್ತಿ ವಿಜೇತ ಕ್ರೀಡಾಪಟುಗಳು ದೇಶದ ವಿವಿಧ ಸಾಯ್ ಕೇಂದ್ರಗಳಲಿದ್ದು, ಇದಕ್ಕೆ ಸ್ಪಂದಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತು ಇತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಉಪಸ್ಥಿತರಿರುತ್ತಾರೆ. ಸಮಾರಂಭ ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ.
ಈ ಬಾರಿ ಗರಿಷ್ಠ 5 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿ ಒಲಿದು ಬಂದಿದೆ. ಸಮಾರಂಭದ ಸಮಯದಲ್ಲಿ ಕುಸ್ತಿಪಟು ವಿನೇಶ್ ಪೋಗಟ್ ಸೋನೆಪಟ್ ಸಾಯ್ ಕೇಂದ್ರದಲ್ಲಿ, ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್, ಪ್ಯಾರಾ ಆ್ಯತ್ಲೀಟ್ ಮರಿಯಪ್ಪನ್ ತಂಗವೇಲು ಬೆಂಗಳೂರಿನಲ್ಲಿ, ಟಿಟಿಪಟು ಮಣಿಕಾ ಬಾತ್ರಾ ಪುಣೆಯ ಸಾಯ್ ಕೇಂದ್ರದಲ್ಲಿ ಉಪಸ್ಥಿತರಿರುವರು. ಉಳಿದಂತೆ ಹೊಸದಿಲ್ಲಿ, ಮುಂಬಯಿ, ಕೋಲ್ಕತಾ, ಚಂಡೀಗಢ, ಹೈದರಾಬಾದ್ ಮತ್ತು ಭೋಪಾಲ್‌ನ ಸಾಯ್ ಕೇಂದ್ರಗಳಲ್ಲಿ ಪ್ರಶಸ್ತಿ ಪುರಸ್ಕೃತರು ಹಾಜರಿರುತ್ತಾರೆ. ಎಲ್ಲ ಸಾಧಕರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, 3 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಕ್ವಾರಂಟೈನ್‌ನಲ್ಲಿರುವ ಹಾಗೂ ದೇಶದ ಹೊರಗಿರುವ ಪ್ರಶಸ್ತಿ ಪುರಸ್ಕೃತರಿಗೆ ಮುಂದಿನ ದಿನಗಳಲ್ಲಿ ಟ್ರೋಫಿ ನೀಡಲಾಗುವುದು ಎಂದು ಸಾಯ್ ತಿಳಿಸಿದೆ.