Advertisement

ಕ್ರೀಡಾ ಪ್ರಶಸ್ತಿ ಸಮಾರಂಭ ಎರಡು ತಿಂಗಳು ವಿಳಂಬ?

06:05 PM Jul 31, 2020 | Hari Prasad |

ಹೊಸದಿಲ್ಲಿ: ಈ ಬಾರಿಯ ರಾಷ್ಟ್ರೀಯ ಕ್ರೀಡಾ ಪುರಸ್ಕಾರ ಸಮಾರಂಭ ಕೋವಿಡ್ 19 ಕಾರಣದಿಂದ ವಿಳಂಬಗೊಳ್ಳಲಿದೆ.

Advertisement

ಇದು ಕನಿಷ್ಠ ಎರಡು ತಿಂಗಳ ಕಾಲ ಮುಂದೂಡಲ್ಪಡಬಹುದು ಎಂದು ತಿಳಿದು ಬಂದಿದೆ.

ಸಂಪ್ರದಾಯದಂತೆ ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮದಿನದಂದು (ಆ. 29) ರಾಷ್ಟ್ರಪತಿ ಭವನದಲ್ಲಿ ಈ ಸಮಾರಂಭ ನಡೆಯುತ್ತದೆ. ರಾಜೀವ್‌ ಗಾಂಧಿ ಖೇಲ್‌ರತ್ನ, ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್‌ಚಂದ್‌ ಪ್ರಶಸ್ತಿಗಳನ್ನು ರಾಷ್ಟ್ರಪತಿಯವರೇ ಕ್ರೀಡಾ ಸಾಧಕರಿಗೆ ನೀಡುತ್ತಿದ್ದರು.

ಆದರೆ ಕೋವಿಡ್ 19 ಸೋಂಕಿನಿಂದ ರಾಷ್ಟ್ರಪತಿ ಭವನದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದು ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಅನ್ವಯವಾಗಲಿದೆ.

ರಾಷ್ಟ್ರಪತಿ ಭವನದ ಆರೋಗ್ಯ ಮಾರ್ಗಸೂಚಿ ಬಿಡುಗಡೆಗೊಂಡ ಬಳಿಕವಷ್ಟೇ ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ.

Advertisement

ಮಾರ್ಗಸೂಚಿಯ ನಿರೀಕ್ಷೆ
‘ರಾಷ್ಟ್ರಪತಿ ಭವನದಿಂದ ನಮಗೆ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಇನ್ನಷ್ಟೇ ನಾವು ಮಾತುಕತೆ ನಡೆಸಬೇಕಿದೆ.

ಹೀಗಾಗಿ ಈ ಸಮಾರಂಭ ಯಾವಾಗ ನಡೆದೀತು ಎಂದು ಈಗ ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಹಿಂದೆಯೂ ನಾನಾ ಕಾರಣಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬಗೊಂಡದ್ದಿದೆ. ಈ ಬಾರಿ ಅ. 29ರಂದು ನಡೆಯದೇ ಹೋದರೆ ಇದು ಒಂದು ಅಥವಾ ಎರಡು ತಿಂಗಳು ಮುಂದೂಡಲ್ಪಡಬಹುದು.

ದೇಶದಲ್ಲಿ ಯಾವುದೇ ಸಭೆ, ಸಮಾರಂಭ ನಡೆಸಬಾರದು ಎಂಬ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಎಲ್ಲರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ಮುಖ್ಯ’ ಎಂದು ಅವರು ಹೇಳಿದರು.

ಸಮಿತಿಯೇ ರಚನೆಯಾಗಿಲ್ಲ
ಪ್ರಶಸ್ತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಈಗಾಗಲೇ ಸಾವಿರಾರು ಅರ್ಜಿಗಳು ಬಂದಿವೆ. ಇದರ ಆಯ್ಕೆಗಾಗಿ ಸಮಿತಿಯನ್ನು ಕೂಡ ರಚಿಸಲಾಗಿಲ್ಲ. ಹೀಗಾಗಿ ಸಮಾರಂಭ ವಿಳಂಬಗೊಳ್ಳುವುದು ಖಚಿತ. ಆದರೆ ಇದು ನಡೆದೇ ನಡೆಯುತ್ತದೆ, ಕ್ರೀಡಾಪಟುಗಳು ಮತ್ತು ತರಬೇತುದಾರರು ನಿರಾಶರಾಗಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿ ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next