Advertisement

ಹೆಮ್ಮಾಡಿಯ ರೈಸನ್‌ ಕರ್ನಾಟಕ ತಂಡದ ನಾಯಕ

10:53 PM Feb 26, 2021 | Team Udayavani |

ಕುಂದಾಪುರ: ಒಡಿಶಾದ ಭುವನೇಶ್ವರದಲ್ಲಿ ಮಾ. 5ರಿಂದ 11ರ ವರೆಗೆ ನಡೆಯಲಿರುವ 69ನೇ ರಾಷ್ಟ್ರೀಯ ಸೀನಿಯರ್‌ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್‌ ತಂಡವನ್ನು ಕುಂದಾಪುರದ ಹೆಮ್ಮಾಡಿಯ ರೈಸನ್‌ ಬೆನೆಟ್‌ ರೆಬೆಲ್ಲೊ ಮುನ್ನಡೆಸಲಿದ್ದಾರೆ.  ತಂಡದಲ್ಲಿ ವಂಡ್ಸೆ ಸಮೀಪದ ಚಿತ್ತೂರಿನ ನವೀನ್‌ ಕಾಂಚನ್‌ ಹಾಗೂ ಕಾರ್ಕಳದ ಸುಧೀರ್‌ ಶೆಟ್ಟಿ ಸ್ಥಾನ ಪಡೆದಿದ್ದಾರೆ.

Advertisement

ಹೆಮ್ಮಾಡಿ ಗ್ರಾಮದ ಮೂವತ್ತುಮುಡಿಯ ಕೃಷಿಕ ದಂಪತಿ ಬೋನಿಫಾಸ್‌-ಜೆಸಿಂತಾ ರೆಬೆಲ್ಲೊ ಅವರ ಪುತ್ರನಾದ ರೈಸನ್‌ ಅವರು ವಾಲಿಬಾಲ್‌ ಆಟಗಾರನಾಗಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. 2019ರಲ್ಲಿ ನಡೆದ 67ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡ ಗೆದ್ದು ಬರುವಲ್ಲಿ ರೈಸನ್‌ ಪಾತ್ರ ಪ್ರಮುಖವಾಗಿತ್ತು.

ರೈಸನ್‌ ಸಾಧನೆ :

2013ರಲ್ಲಿ ಪಶ್ಚಿಮ ಬಂಗಾಲದಲ್ಲಿ ನಡೆದ ರಾಷ್ಟ್ರ ಮಟ್ಟದ ಜೂನಿಯರ್‌ ಪಂದ್ಯಾವಳಿ, ಮಹಾರಾಷ್ಟ್ರದಲ್ಲಿ ಜರಗಿದ ಯುವ ರಾಷ್ಟ್ರೀಯ ಪಂದ್ಯಾವಳಿ, 2014ರಲ್ಲಿ ರಾಜಸ್ಥಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಜೂನಿಯರ್‌ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೈಸನ್‌ ರಾಜಸ್ಥಾನದಲ್ಲಿ ನಡೆದ ಯುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ರಜತ ಪದಕ ಜಯಿಸಿದ್ದರು. 2015ರಲ್ಲಿ ತಮಿಳುನಾಡಿನಲ್ಲಿ ಜರಗಿದ ಫೆಡರೇಶನ್‌ ಕಪ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ, 2016ರ ಫೆಡರೇಶನ್‌ ಕಪ್‌ ಪಂದ್ಯಾವಳಿಯಲ್ಲಿ ರಜತ ಪದಕ ಒಲಿದಿತ್ತು. 2020ರ ಫೆಡ್‌ ಕಪ್‌ನಲ್ಲಿ ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶ್ರೀಲಂಕಾದಲ್ಲಿ ನಡೆದ 10ನೇ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ, 2019ರಂದು ಚೆನ್ನೈಯಲ್ಲಿ ನಡೆದ ಸೀನಿಯರ್‌ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್‌ ಆಗುವಲ್ಲಿ ಅದ್ಭುತ ನಿರ್ವಹಣೆ ತೋರಿದ ಇವರು ಚಿನ್ನದ ಪದಕ ಜಯಿಸಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಆಡುವಾಸೆ :

Advertisement

ಕೃಷಿ ಕುಟುಂಬದ ರೈಸನ್‌ ಅವರದು ಎತ್ತರದ ನಿಲುವು, ಸದೃಢಕಾಯ ವಾಲಿಬಾಲ್‌ಗೆ ಹೇಳಿ ಮಾಡಿಸಿದಂತಿದೆ. ಇವರಲ್ಲಿನ ಪ್ರತಿಭೆ ಗುರುತಿಸಿದ ಕುಂದಾಪುರ ವಾಲಿಬಾಲ್‌ ಫ್ರೆಂಡ್ಸ್‌ ಉತ್ತಮ ತರಬೇತಿ ನೀಡಿತ್ತು. ಭಾರತದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ರೈಸನ್‌ ಅವರ ಮಹತ್ವದ ಕನಸು.

ಚಿತ್ತೂರಿನ ನವೀನ್‌ ಕಾಂಚನ್‌ :

ರಾಜ್ಯ ತಂಡದಲ್ಲಿ ಸ್ಥಾನ ಪಡೆದಿರುವ ಕುಂದಾಪುರ ಮೂಲದ ಮತ್ತೋರ್ವ ಆಟಗಾರ ನವೀನ್‌ ಕಾಂಚನ್‌. ಇವರು ಚಿತ್ತೂರು ಗ್ರಾಮದ ನ್ಯಾಗಳಮನೆ ಮಂಜುನಾಥ-ರತ್ನಾ ದಂಪತಿ ಪುತ್ರ. ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ. ವ್ಯಾಸಂಗ ಮುಗಿಸಿದ್ದಾರೆ.  ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ್‌ ಕುಮಾರ್‌ ಶೆಟ್ಟಿ, ಕುಂದಾಪುರದ ರಾಷ್ಟ್ರೀಯ ವಾಲಿಬಾಲ್‌ ಆಟಗಾರ ಮಹಮ್ಮದ್‌ ಸಮೀರ್‌ ಮತ್ತು ಸುನಿಲ್‌ ಕುಮಾರ್‌ ಶೆಟ್ಟಿ ಅವರ ಗರಡಿಯಲ್ಲಿ ಮೂಡಿಬಂದ ವಾಲಿಬಾಲ್‌ ಪ್ರತಿಭೆಯಾಗಿದ್ದಾರೆ.

ನವೀನ್‌ ವಾಲಿಬಾಲ್‌ನ ಸರ್ವಿಸ್‌, ಪಾಸಿಂಗ್‌, ಅಟ್ಯಾಕಿಂಗ್‌, ಬ್ಲಾಕಿಂಗ್‌ ವಿಭಾಗಗಳಲ್ಲಿ ಉತ್ತಮ ಹಿಡಿತ ಸಾಧಿಸಿದ್ದಾರೆ.

ಈ ಹಿಂದೆ 6 ಬಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದು, ಈಗ  ತಂಡದ ನಾಯಕತ್ವ ವಹಿಸಿದ್ದೇನೆ. ಈ ಬಗ್ಗೆ ಖುಷಿಯಿದೆ. ಪಂದ್ಯಾವಳಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಭಾರತ ತಂಡದಲ್ಲಿ ಆಡಬೇಕು ಎನ್ನುವ ಕನಸಿದೆ. ಆ ದಿಸೆಯಲ್ಲಿ  ಪ್ರಯತ್ನ  ಸಾಗಿದೆ.ರೈಸನ್‌ ರೆಬೆಲ್ಲೊ ಹೆಮ್ಮಾಡಿ, ಕರ್ನಾಟಕ ವಾಲಿಬಾಲ್‌ ತಂಡದ ನಾಯಕ

 

Advertisement

Udayavani is now on Telegram. Click here to join our channel and stay updated with the latest news.

Next