ಪಾಂಡವಪುರ : ಮನುಷ್ಯನಾಗಿ ಹುಟ್ಟುವುದೇ ಅಪರೂಪ. ಹೀಗಾಗಿ ಪ್ರತಿಯೊಬ್ಬರ ಜೀವವು ಅತ್ಯಮೂಲ್ಯವಾಗಿದ್ದು, ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ಪಾಲಿಸಿ, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಅಪಘಾತ ಸಂಖ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸುಧಾರಿಸಬಹುದು ಎಂದು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಎಸ್. ವೇದಮೂರ್ತಿ ತಿಳಿಸಿದರು.
ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಮಂಗಳವಾರ ಮಂಡ್ಯ ಜಿಲ್ಲಾ ಪೊಲೀಸ್, ಶ್ರೀರಂಗ ಪಟ್ಟಣ ಉಪವಿಭಾಗ ಹಾಗೂ ಪಾಂಡವಪುರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2021 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾನೂನಿಗೆ ಗೌರವ ನೀಡಿ: ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಕಾನೂನಿಗೆ ಗೌರವ ನೀಡಬೇಕು. ವಾಹನ ಸವಾರರು ಸುರಕ್ಷತೆ ಮತ್ತು ಜಾಗೃತರಾಗಿ ವಾಹನ ಚಲಾಯಿಸಬೇಕು. ಜತೆಗೆ ವಾಹನಕ್ಕೆ ಅಗತ್ಯವಾದ ವಿಮೆ, ಚಾಲನಾ ಪರವಾನಗಿ ಹಾಗೂ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ವಾಹನ ಸವಾರರು ತಮ್ಮ ಪ್ರಾಣ ರಕ್ಷಣೆಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ :ಪೋಷಕರೇ ನಿಮ್ಮ ಮಕ್ಕಳ ಮೇಲೆ ನಿಗಾವಹಿಸಿ : ಮಿಮ್ಸ್ ನಿರ್ದೇಶಕ ಡಾ.ಹರೀಶ್
ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ಸ್ಕೌಟ್ ಮತ್ತು ಗೈಡ್, ಎನ್‌ಸಿಸಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ್, ಸಬ್ ಇನ್ಸ್ ಪೆಕ್ಟರ್‌ಗಳಾದ ಪೂಜಾ ಕುಂಟೋಜಿ, ಗಣೇಶ್, ಸಹಾಯ ಸಬ್‌ಇನ್ಸ್‌ಪೆಕ್ಟರ್ ನಾಗೇಂದ್ರ, ಅಭಿಷೇಕ್ ಹಾಜರಿದ್ದರು.