ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ನಂತರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್) ಮಾಹಿತಿ ಸಂಗ್ರಹ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮತಿ ನೀಡಿದ್ದು, ಎನ್ ಪಿಆರ್ ಜನಗಣತಿ ಜತೆ ಜೋಡಣೆಯಾಗಲಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ದತ್ತಾಂಶ ಸಂಗ್ರಹಿಸುವ ಈ ಯೋಜನೆಗೆ 8,500 ಕೋಟಿ ರೂಪಾಯಿ ವ್ಯಯವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಜನಗಣತಿ ಆಯೋಗದ ಪ್ರಕಾರ, ದೇಶದ ಪ್ರತಿಯೊಬ್ಬ ಪ್ರಜೆಯ ಗುರುತಿನ ಸಮಗ್ರ ಮಾಹಿತಿಯನ್ನೊಳಗೊಂಡ ದತ್ತಾಂಶದ ಸಂಗ್ರಹವೇ ಎನ್ ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಎಂದು ವಿವರಿಸಿದೆ.
ಕೇಂದ್ರದ ಗ್ರೀನ್ ಸಿಗ್ನಲ್ ನಂತರ ಜನಗಣತಿ ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಆರಂಭವಾಗಲಿದೆ. ಕಾಯ್ದೆಯ ಪ್ರಕಾರ, ಸಾಮಾನ್ಯ ನಿವಾಸಿಯೊಬ್ಬರು ಒಂದು ಪ್ರದೇಶದಲ್ಲಿ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸ್ತವ್ಯ ಹೂಡಿದ್ದರೆ. ಪ್ರತಿಯೊಬ್ಬ ನಾಗರಿಕನೂ (ಎನ್ ಪಿಆರ್) ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಏತನ್ಮಧ್ಯೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ, ಎನ್ ಸಿಆರ್ ರೀತಿಯೇ ಎನ್ ಪಿಆರ್ ಅನ್ನು ವಿರೋಧಿಸಿದ್ದು, ಎನ್ ಪಿಆರ್ ಅಪ್ ಡೇಟ್ ಮಾಡುವ ಪ್ರಕ್ರಿಯೆಗೆ ಪಶ್ಚಿಮಬಂಗಾಳ ಸಹಕಾರ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಎನ್ ಪಿಆರ್ ರಾಷ್ಟ್ರೀಯ ಪೌರತ್ವ ನೋಂದಣಿಯ ಪೂರ್ವ ಭಾವಿ ತಯಾರಿಯಾಗಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮಬಂಗಾಳ ರಾಜ್ಯದ ಜತೆಗೆ ಕೇರಳ, ಪಂಜಾಬ್ ಕೂಡಾ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ವಿರೋಧ ವ್ಯಕ್ತಪಡಿಸಿದೆ. ಆದರೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಬೇರೆ ಆಯ್ಕೆಗಳಿಲ್ಲ. ಅದನ್ನು ಪ್ರತಿಯೊಬ್ಬ ನಾಗರಿಕನ ನೋಂದಣಿಯಾಗಲೇಬೇಕಾಗಿದೆ ಎಂದು ತಿಳಿಸಿದೆ.