Advertisement

ಕರಾವಳಿ ಮತದಾರರ ಸೆಳೆಯಲು ರಾಷ್ಟ್ರೀಯ ಪಕ್ಷಗಳ ತಂತ್ರ

12:15 PM Apr 07, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇರುವ ಕರಾವಳಿ ಮತದಾರರನ್ನು ಸೆಳೆಯಲು ಆ ಭಾಗದ ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ವಿಭಿನ್ನ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

Advertisement

ಜಯನಗರ, ವಿಜಯನಗರ, ಮಲ್ಲೇಶ್ವರ, ರಾಜಾಜಿನಗರ, ಮತ್ತೀಕೆರೆ, ಚಾಮರಾಜಪೇಟೆ ಸೇರಿದಂತೆ ರಾಜಧಾನಿಯ ಪ್ರಮುಖ ಬಡಾವಣೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಮಂದಿ ಇದ್ದು, ಹೋಟೆಲ್‌ ಉದ್ಯಮ, ಬೇಕರಿ, ಖಾಸಗಿ ಕಂಪೆನಿ ಸೇರಿದಂತೆ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮನವೊಲಿಸಲು ಈಗಾಗಲೇ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿದೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಶೀಲಿಸುವಾಗ ಪಕ್ಷದ ಕಾರ್ಯಕರ್ತರು, ಉದ್ಯೋಗ, ವಿದ್ಯಾಭ್ಯಾಸ ಹಾಗೂ ಇತರ ಉದ್ದೇಶಕ್ಕೆ ಬೆಂಗಳೂರು ಸೇರಿದವರ ವಿವರವನ್ನು ಬೂತ್‌ ಮಟ್ಟದಲ್ಲೇ ಪಡೆಯುತ್ತಿದ್ದು, ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದಾರೆ.

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಪ್ರಮುಖರು ತಮ್ಮ ಊರಿಂದ ಬೇರೆ ಊರಿಗೆ ಹೋಗಿರುವ ಮತದಾರರ ಸಂಪರ್ಕ ಪ್ರಕ್ರಿಯೆಗೆ ಚುನಾವಣೆ ಘೋಷಣೆಗೂ ಮೊದಲೇ ಚಾಲನೆ ನೀಡಿದ್ದರು. ನೀತಿ ಸಂಹಿತೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಕೆಲವು ಶಾಸಕರು ಚುನಾವಣೆ ಘೋಷಣೆಗೂ ಮೊದಲೇ ಸಭೆ ನಡೆಸಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಯ ಗೆಲುವಿಗೆ ಒಂದೊಂದು ಮತವೂ ಮುಖ್ಯವಾಗಿರುವುದರಿಂದ ಚುನಾವಣೆಯ ಹಿಂದಿನ ದಿನ ಬೆಂಗಳೂರಿನಲ್ಲಿರುವ ತಮ್ಮ ಕ್ಷೇತ್ರದ ಮತದಾರರನ್ನು ಕರೆದುಕೊಂಡು ಹೋಗಲು ಬೇಕಾದ ವ್ಯವಸ್ಥೆಯನ್ನು ಮಾಡಲು ರಾಜಕೀಯ ಪಕ್ಷಗಳು ಸಿದ್ಧವಿದೆ. ಆದರೆ, ಚುನಾವಣಾ ಆಯೋಗ ಇದಕ್ಕೆ ಅವಕಾಶ ನೀಡದೇ ಇರುವುದರಿಂದ ಮತದಾರರು ಸ್ವಯಂ ಪ್ರೇರಿತವಾಗಿ ಮತದಾನಕ್ಕೆ ಬರುವ ರೀತಿಯಲ್ಲಿ ಪ್ರೇರೇಪಿಸುತ್ತಿದ್ದಾರೆ. ಅಲ್ಲದೆ, ಸಂಬಂಧಿಕರ ಮೂಲಕ ಒತ್ತಡ ಹೇರುತ್ತಿದ್ದಾರೆ.

Advertisement

ಸಭೆಗಾಗಿ ಅನುಮತಿ: ಕರಾವಳಿ ಭಾಗದ ಮತದಾರರ ಪಟ್ಟಿಯನ್ನು ಎರಡು ಪಕ್ಷದವರು ಈಗಾಗಲೇ ಸಿದ್ಧಪಡಿಸಿದ್ದಾರೆ. ಬೆಂಗಳೂರಿನಲ್ಲೇ ಅವರ ಸಭೆ ನಡೆಸಲು ಚುನಾವಣಾ ಆಯೋಗದಿಂದ ಅನುಮತಿ ಕೇಳಿದ್ದಾರೆ. ಚುನಾವಣಾ ಆಯೋಗದ ಅನುಮತಿ ನೀಡಿದ ತಕ್ಷಣವೇ ಎರಡು ಪಕ್ಷದವರು ಜಯನಗರ ಅಥವಾ ವಿಜಯನಗರ ಭಾಗದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.

ಅಭಿವೃದ್ಧಿ ವಿವರಣೆ: ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು ಹಾಗೂ ಕಾಫ‌ು ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಒಂದೊಂದು ಪಕ್ಷದಲ್ಲಿ ಒಬ್ಬೊಬ್ಬರಿಗೆ ನೀಡಲಾಗಿದೆ. ಆ ಕ್ಷೇತ್ರದಲ್ಲಿ ತಮ್ಮ ಪಕ್ಷ ಮಾಡಿರುವ ಅಭಿವೃದ್ಧಿ ಕಾರ್ಯ ಮತ್ತು ಪಕ್ಷ ಅಧಿಕಾರಕ್ಕೆ ಬಂದರೆ, ಏನು ಮಾಡುತ್ತೇವೆ ಎಂಬುದನ್ನು ಪಿಪಿಟಿ ಮೂಲಕ ಸಭೆಯಲ್ಲಿ ಬೆಂಗಳೂರಿನ ಕರಾವಳಿ ಮತದಾರರ ಗಮನಕ್ಕೆ ತರಲಿದ್ದಾರೆ. ಇದಕ್ಕಾಗಿಯೇ ವಾಟ್ಸ್‌ಆಫ್ ಗ್ರೂಪ್‌ಗ್ಳನ್ನು ಸಿದ್ಧಪಡಿಸಲಾಗಿದೆ. ಅದರ ನಿರ್ವಹಣೆಯನ್ನು ಬೆಂಗಳೂರಿನಲ್ಲೇ ಇರುವವರು ಮಾಡುತ್ತಿದ್ದಾರೆ.

ಕರಾವಳಿ ಭಾಗದ ಮತದಾರರ ಸಭೆ ನಡೆಸಲು ಚುನಾವಣಾ ಆಯೋಗದಿಂದ ಅನುಮತಿ ಕೇಳಿದ್ದೇವೆ. ಚುನಾವಣಾ ಆಯೋಗ ಅನುಮತಿ ನೀಡಿದ ಒಂದೆರೆಡು ವಾರದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ.
-ಗೋಪಾಲ ಪೂಜಾರಿ, ಬೈಂದೂರು ಶಾಸಕ

ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯವನ್ನು ಪಿಪಿಟಿ ಮೂಲಕ ಬೆಂಗಳೂರಿನಲ್ಲಿ ಇರುವ ನಮ್ಮ ಕ್ಷೇತ್ರದ ಮತದಾರರಿಗೆ ತಿಳಿಸಲಾಗುತ್ತದೆ. ಇಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೇ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಒಗ್ಗೂಡಿಸುವ ಕೆಲಸ ಮಾಡಲಿದ್ದೇವೆ.
-ಸುನಿಲ್‌ ಕುಮಾರ್‌, ಕಾರ್ಕಳ ಶಾಸಕ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next