ನವದೆಹಲಿ: ಬೀದಿನಾಯಿಗಳ ದಾಳಿಗೆ ಒಳಗಾಗಿ ಮೆದುಳಿನಲ್ಲಿ ರಕ್ತಸ್ರಾವಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಘ್ ಬಕ್ರಿ ಚಹಾ ಗ್ರೂಪ್ ನ ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ(49) ಭಾನುವಾರ ಸಂಜೆ(ಅ.22 ರಂದು) ನಿಧನರಾಗಿದ್ದಾರೆ.
ಅವರ ನಿಧನದ ಸುದ್ದಿಯನ್ನು ಕಂಪೆನಿ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದು, ಸಂತಾಪ ಸೂಚಿಸಿ, ದುಃಖ ವ್ಯಕ್ತಪಡಿಸಿದೆ.
ವಾಘ್ ಬಕ್ರಿ ಚಹಾ ಕಂಪೆನಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದ ಪರಾಗ್ ದೇಸಾಯಿ ಕಳೆದ ವಾರ ಮುಂಜಾನೆ ವಾಕಿಂಗ್ ಗೆ ಹೋಗುವ ವೇಳೆ ಅವರ ನಿವಾಸದ ಪಕ್ಕದಲ್ಲಿ ಬೀದಿನಾಯಿಗಳು ದಾಳಿ ಮಾಡಿದ್ದವು. ಅದರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಅವರು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರ ತಲೆಗೆ ಗಂಭೀರ ಸ್ವರೂಪದ ಏಟಾಗಿತ್ತು.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಸಂಜೆ ಮೆದುಳಿನಲ್ಲಿ ರಕ್ತಸ್ರಾವವಾಗಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ವಾಘ್ ಬಕ್ರಿ ಟೀ ಗ್ರೂಪ್‌ನ ಬೋರ್ಡ್‌ನಲ್ಲಿರುವ ಇಬ್ಬರು ಕಾರ್ಯನಿರ್ವಾಹಕ ನಿರ್ದೇಶಕರಲ್ಲಿ ಪರಾಗ್ ಒಬ್ಬರಾಗಿದ್ದರು. ವಾಘ್ ಬಕ್ರಿ ಟೀ ಗ್ರೂಪ್ ನ್ನು 1892 ರಲ್ಲಿ ನಾರಂದಾಸ್ ದೇಸಾಯಿ ಸ್ಥಾಪಿಸಿದರು. ಇಂದು ₹ 2,000 ಕೋಟಿ ವಹಿವಾಟನ್ನು ಈ ಕಂಪೆನಿ ನಡೆಸುತ್ತಿದೆ.
ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಛತ್ತೀಸ್‌ಗಢ, ಪಶ್ಚಿಮ ಉತ್ತರ ಪ್ರದೇಶ, ಗೋವಾ, ಪಂಜಾಬ್, ಚಂಡೀಗಢ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಕಂಪೆನಿಯ ಶಾಖೆಗಳಿವೆ.
ರಾಜ್ಯಸಭಾ ಸಂಸದ ಹಾಗೂ ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿಸಿಂಗ್ ಗೋಹಿಲ್ ಸೇರಿದಂತೆ ಅನೇಕ ಗಣ್ಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.