ಬೆಂಗಳೂರು: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ರಾಷ್ಟ್ರೀಯ ಮಿಲಿಟರಿ ಶಾಲೆಯು ದೇಶದ ಮೂಲತತ್ವ “ವೈವಿಧ್ಯದಲ್ಲಿ ಏಕತೆ’ಯ ಪ್ರತೀಕವಾಗಿದೆ’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶ್ಲೇಷಿಸಿದರು.
ಸೋಮವಾರ ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯ ಸುವರ್ಣ ಮಹೋತ್ಸವ ಸಂಭ್ರಮಾ ಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಏಳೂವರೆ ದಶಕಗಳಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಉದ್ದೇಶಿತ ಶಾಲೆಯು ಈ ಹಿಂದೆ ಸೇನಾ ಸಿಬಂದಿಯ ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಬಳಿಕ ಸಾಮಾನ್ಯ ನಾಗರಿಕರ ಮಕ್ಕಳಿಗೂ ಇಲ್ಲಿ ಶಿಕ್ಷಣ ದೊರೆಯುತ್ತಿದೆ. ಪ್ರಸ್ತುತ ಈ ಶಾಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ಕೇರಳವರೆಗಿನ 23 ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ದೇಶದ ಎಲ್ಲ ಪ್ರದೇಶಗಳ ಸಂಸ್ಕೃತಿ, ಭಾಷೆ, ಆಚರಣೆಗಳು, ಸಂಪ್ರದಾಯಗಳ ಸಮ್ಮಿಲನಕ್ಕೆ ಇದು ವೇದಿಕೆ ಆಗಿದ್ದು, ಆ ಮೂಲಕ “ವೈವಿಧ್ಯದಲ್ಲಿ ಏಕತೆ’ಯನ್ನು ಈ ಶಾಲೆ ಪ್ರತಿನಿಧಿಸುತ್ತದೆ ಎಂದು ಬಣ್ಣಿಸಿದರು.
ತನ್ನ ಸುದೀರ್ಘ ಪಯಣದಲ್ಲಿ ಶ್ರೇಷ್ಠ ನ್ಯಾಯಮೂರ್ತಿಗಳು, ರಾಜ ಕೀಯ ನಾಯಕರು, ನಾಗರಿಕ ಸೇವೆ, ಉದ್ಯಮಿಗಳು, ಕ್ರೀಡೆ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನೇಕ ಕೊಡುಗೆಗಳನ್ನು ನೀಡಿದ ಹೆಗ್ಗಳಿಕೆ ಈ ಶಾಲೆಗೆ ಸಲ್ಲುತ್ತದೆ. ಇದರ ಹಳೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲೂ ಇದ್ದಾರೆ.
ಮರಣೋತ್ತರವಾಗಿ ಪರಮವೀರ ಚಕ್ರ ಗೌರವಕ್ಕೆ ಪಾತ್ರರಾದ ಕ್ಯಾ| ಗುರ್ಬಾಚನ್‌ಸಿಂಗ್ ಸಲಾರಿಯಾ ಕೂಡ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ರಾಷ್ಟ್ರೀಯ ಮಿಲಿಟರಿ ಶಾಲೆ ತನ್ನದೇ ಆದ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವನ್ನು ಹೊಗಳಿದ ರಾಷ್ಟ್ರಪತಿಗಳು, ಕನ್ನಡನಾಡು ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದ ಆಗರವಾಗಿ ಹೊರಹೊಮ್ಮಿದೆ. “ಭಾರತ ಆವಿಷ್ಕಾರ ಸೂಚ್ಯಂಕ’ದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2021ರ ವರದಿಯೊಂದರ ಪ್ರಕಾರ ಬಂಡವಾಳ ಹೂಡಿಕೆಯಲ್ಲಿ ಕೂಡ ವಿಶ್ವದ ಮೊದಲ ಐದು ನಗರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದು ಬಣ್ಣಿಸಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರಪತಿಗಳ ಪತ್ನಿ ಸವಿತಾ ಕೋವಿಂದ್ ಮತ್ತಿತರರು ಉಪಸ್ಥಿತರಿದ್ದರು.