ಮಣಿಪಾಲ: ತುಂಬಾ ರುಚಿಕರವಾದ ಹಾಗೂ ಹಣ್ಣುಗಳ ರಾಜ ಎಂದೇ ಜನಪ್ರಿಯವಾಗಿರುವ ಮಾವು ಎಲ್ಲರಿಗೂ ಅಚ್ಚುಮೆಚ್ಚು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಅಷ್ಟೇ ಯಾಕೆ, ವಿಶೇಷ ದಿನಗಳಲ್ಲಿ ಮಾವಿನ ಹಣ್ಣಿನ ಜ್ಯೂಸ್ ಗೆ ಬೇಡಿಕೆ ಇದೆ. ಬೇಸಿಗೆ ಕಾಲದಲ್ಲಿ ನಮ್ಮ ಫೇವರಿಟ್ ಹಣ್ಣುಗಳ ಪಟ್ಟಿಯಲ್ಲಿ ಮಾವಿನ ಹಣ್ಣಿಗೆ ಮೊದಲ ಸ್ಥಾನ.
ಮಾವಿನ ಹಣ್ಣು ಕೇವಲ ತಿನ್ನಲು ಮಾತ್ರವಲ್ಲ, ಮಾವಿನ ಹಣ್ಣಿನ ರಸಾಯನ, ಮಾವಿನ ಕಾಯಿ ಉಪ್ಪಿನಕಾಯಿ, ಮ್ಯಾಂಗೋ ಐಸ್ ಕ್ರೀಮ್ ಹೀಗೆ ಹಲವು ಬಗೆಗಳಿವೆ. ಇಂದು(ಜುಲೈ 22) ರಾಷ್ಟ್ರೀಯ ಮಾವು ದಿನಾಚರಣೆ. ಈ ಹಿನ್ನೆಲೆಯಲ್ಲಿ ಮಾವಿನ ಹಣ್ಣಿನ ವಿಶೇಷತೆ ಮತ್ತು ಅದರ ಇತಿಹಾಸದ ಬಗ್ಗೆ ಕಿರು ಅವಲೋಕನ ಇಲ್ಲಿದೆ…
ನ್ಯಾಷನಲ್ ಮ್ಯಾಂಗೋ ಡೇ: ಇತಿಹಾಸ
ಹಣ್ಣುಗಳ ರಾಜ ಎಂದೇ ಪ್ರಸಿದ್ಧಿಯಾಗಿರುವ ಮಾವಿನ ಹಣ್ಣಿನ ಮೂಲ ಮತ್ತು ಇತಿಹಾಸದ ದಿನ ಗೊತ್ತಿಲ್ಲ. ಆದರೆ ಮಾವಿನ ಹಣ್ಣಿಗೆ ದೀರ್ಘಕಾಲದ ಇತಿಹಾಸವಿದೆ ಎಂದು ವಿಶ್ಲೇಷಿಸಲಾಗಿದೆ. ಮಾವಿನ ಹಣ್ಣನ್ನು ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ಮೊದಲು ಬೆಳೆಯಾಗಿದೆ ಎಂದು ವರದಿ ವಿವರಿಸಿದೆ. ಭಾರತೀಯ ಜಾನಪದ ಮತ್ತು ಧಾರ್ಮಿಕ ಕಾರ್ಯದಲ್ಲಿ ಮಾವಿನ ಹಣ್ಣು ನಿಕಟ ಸಂಬಂಧ ಹೊಂದಿದೆ. ಅಲ್ಲದೇ ಗೌತಮ ಬುದ್ಧನಿಗೆ ಮಾವಿನ ತೋಟವನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬುದ್ಧನ ಜಾತಕ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಮಾವಿನ ಹಣ್ಣಿನ ಕುರಿತು ಉಲ್ಲೇಖ ಇದ್ದಿರುವುದಾಗಿ ವರದಿ ತಿಳಿಸಿದೆ.
Related Articles
ರಾಮಾಯಣದಲ್ಲಿನ ಮಾವಿನ ಹಣ್ಣಿನ ಕಥೆ:
ಪ್ರಾಚೀನ ಕಾಲದಲ್ಲಿ ಭಾರತೀಯರಿಗೆ ಮಾವಿನ ಹಣ್ಣಿನ ಬಗ್ಗೆ ತಿಳಿದಿರಲಿಲ್ಲವಾಗಿತ್ತಂತೆ. ಆದರೆ ಮಾವಿನ ಹಣ್ಣನ್ನು ಭಾರತಕ್ಕೆ ಪರಿಚಯಿಸಿದ ಹೆಗ್ಗಳಿಕೆ ಹನುಮಂತನಿಗೆ ಸಲ್ಲತಕ್ಕದ್ದು. ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ದಿದ್ದ ಕಥೆ ಎಲ್ಲರಿಗೂ ಗೊತ್ತಿದೆ. ಆ ಬಳಿಕ ಶ್ರೀರಾಮ ಸೀತೆಯನ್ನು ಹುಡುಕಲು ಹನುಮಂತನನ್ನು ಲಂಕೆಗೆ ಕಳುಹಿಸಿದ್ದ ಸಂದರ್ಭದಲ್ಲಿ ಹನುಮಂತನು ಅಶೋಕವನದಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ತಿಂದಿದ್ದ. ಅದರಲ್ಲಿ ಮಾವು ಆತನಿಗೆ ತುಂಬಾ ಇಷ್ಟವಾಗಿತ್ತಂತೆ. ಆಗ ಆ ಹಣ್ಣನ್ನು ಶ್ರೀರಾಮನಿಗೂ ಉಡುಗೊರೆಯಾಗಿ ನೀಡಬೇಕೆಂದು ಹನುಮಂತ ಯೋಚಿಸಿ, ಅದರಂತೆ ಶ್ರೀರಾಮನಿಗೆ ಮಾವಿನ ಹಣ್ಣನ್ನು ಸಮರ್ಪಿಸಿದ್ದ. ಆ ಹಣ್ಣನ್ನು ತಿಂದು ಎಸೆದ ಬೀಜದಿಂದ ಮಾವಿನ ಮರಗಳು ಬೆಳೆಯಲಾರಂಭಿಸಿತ್ತು ಎಂಬ ಉಲ್ಲೇಖವಿದೆ.