Advertisement

13ರಂದು ರಾಷ್ಟ್ರೀಯ ಲೋಕ ಅದಾಲತ್‌

12:55 PM Jul 05, 2019 | Suhan S |

ಧಾರವಾಡ: ನ್ಯಾಯಾಧೀಶರು, ನಾಯವಾದಿಗಳು ಸೇರಿದಂತೆ ಎಲ್ಲ ವರ್ಗದ ಜನರಿಗೂ ಸಾಮಾಜಿಕ ಜವಾಬ್ದಾರಿ ಇದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಅರವಿಂದಕುಮಾರ ಹೇಳಿದರು.

Advertisement

ಜು.13ರಂದು ಆಯೋಜಿಸಿರುವ ರಾಷ್ಟ್ರೀಯ ಲೋಕ ಅದಾಲತ್‌ ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘದ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಲೋಕ ಅದಾಲತ್‌ಗೆ ರಾಜಿ ಆಗಬಹುದಾದ ಪ್ರಕರಣಗಳನ್ನು ಉಭಯ ಕಕ್ಷಿದಾರರಿಗೆ ತಿಳಿವಳಿಕೆ ನೀಡುವ ಮೂಲಕ ಶಿಫಾರಸು ಮಾಡಿ, ನ್ಯಾಯ ಕೊಡಿಸುವ ಮೂಲಕ ಸಮಾಜದ ಋಣ ತೀರಿಸಬಹುದು. ಎಲ್ಲರೂ ಕೈ ಜೋಡಿಸಿ ರಾಷ್ಟ್ರೀಯ ಲೋಕ ಅದಾಲತ್‌ ಮೂಲಕ ಸಮಾಜಮುಖೀ ಕಾರ್ಯ ಮಾಡಬೇಕು ಎಂದರು.

ನ್ಯಾಯವಾದಿಗಳು ತಮ್ಮ ವೃತ್ತಿಯೊಂದಿಗೆ ಸಮಾಜದ ಹಿತ ಕಾಯುವ ಕಾರ್ಯ ಮಾಡಬೇಕು. ತಿಂಗಳಲ್ಲಿ ಒಂದು ದಿನ ಕನಿಷ್ಠ 10 ನ್ಯಾಯವಾದಿಗಳು ಸೇರಿ ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ನ್ಯಾಯವಾದಿಗಳು ಕೌಟುಂಬಿಕ ಪ್ರಕರಣಗಳನ್ನು ಆದ್ಯತೆ ಮೆರೆಗೆ ಮಾನವೀಯತೆ ಹಿನ್ನಲೆಯಲ್ಲಿ ಬಗೆಹರಿಸಲು ಕ್ರಮ ವಹಿಸಬೇಕು. ನ್ಯಾಯಾಲಯವು ಕುಟುಂಬಗಳನ್ನು, ಕುಟುಂಬ ಸದಸ್ಯರನ್ನು ಒಗ್ಗೂಡಿಸಲು ಶ್ರಮಿಸುತ್ತದೆ. ಪ್ರತಿಯೊಬ್ಬ ನ್ಯಾಯವಾದಿಯೂ ತಮ್ಮಲ್ಲಿರುವ ಪ್ರಕರಣಗಳನ್ನು ಪರಿಶೀಲಿಸಿ ಉಭಯ ಪಕ್ಷಗಾರರಲ್ಲಿ ರಾಜಿ ಮಾಡಬಹುದಾಗಿದ್ದರೆ ಅವುಗಳನ್ನು ಲೋಕ ಅದಾಲತ್‌ಗೆ ಶಿಫಾರಸು ಮಾಡಬೇಕು ಎಂದರು.

Advertisement

ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಮಾತನಾಡಿ, ಜಿಲ್ಲೆಯಲ್ಲಿ ಜು. 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಧಾರವಾಡದಲ್ಲಿ 14, ಹುಬ್ಬಳ್ಳಿಯಲ್ಲಿ 16, ಕುಂದಗೋಳ, ಕಲಘಟಗಿ, ನವಲಗುಂದ ಕೋರ್ಟ್‌ಗಳಲ್ಲಿ ತಲಾ ಎರಡು ಪೀಠಗಳು ಕಲಾಪ ನಡೆಸಲಿವೆ. ಈಗಾಗಲೇ ರಾಜಿ ಆಗಬಹುದಾದ 7095 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧಿಧೀಶ ಚಿಣ್ಣನ್ನವರ ಆರ್‌.ಎಸ್‌. ಮಾತನಾಡಿ, ಎಲ್ಲ ನ್ಯಾಯಾಲಯಗಳು ಸೇರಿ 7918 ಸಿವಿಲ್ ಮತ್ತು 5390 ಕ್ರಿಮಿನಲ್ ಪ್ರಕರಣಗಳು ಜಿಲ್ಲೆಯಲ್ಲಿ ಬಾಕಿ ಇವೆ. ನ್ಯಾಯವಾದಿಗಳು ರಾಜಿ ಆಗಬಹುದಾದ ಪ್ರಕರಣಗಳನ್ನು ಅಲ್ಲಿನ ನ್ಯಾಯಾಧೀಶರಿಗೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗಮನಕ್ಕೆ ತಂದು ಸಹಕರಿಸಬೇಕು ಎಂದರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್‌.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಕೀಲರ ಪರಿಷತ್‌ ಸದಸ್ಯ ವಿ.ಡಿ. ಕಾಮರಡ್ಡಿ, ಎಸ್‌.ಎಂ. ಜಾಲವಾದಿ, ಪ್ರಕಾಶ ಉಡಕೇರಿ, ಹೇಮಂತ ಕಣಕಿಕೊಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next