ಶಹಾಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆ.13ರಂದು ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳ ಬಹುದಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ತಿಳಿಸಿದರು.
ನ್ಯಾಯಾಲಯದಲ್ಲಿ ಶನಿವಾರ ಮಾತನಾಡಿದ ನ್ಯಾಯಾಧೀಶರು, ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತ್ವರಿತವಾಗಿ ನ್ಯಾಯ ಸಿಗಲಿದೆ. ಇದರಿಂದ ಸಮಯ ಹಾಗೂ ಹಣದ ವೆಚ್ಚ ತಪ್ಪಿಸಬಹುದಾಗಿದೆ. ರಾಜಿ ಸಂಧಾನದಿಂದ ಪರಸ್ಪರ ನೆಮ್ಮದಿ ಹಾಗೂ ಸಹ ಬಾಳ್ವೆಯಿಂದ ಬದುಕು ಲಭಿಸಲಿದೆ ಎಂದರು.
ಅದಾಲತ್‌ನಲ್ಲಿ ರಾಜಿ ಸಂದಾನದ ಮೂಲಕ ಬ್ಯಾಂಕ್ ವಸೂಲಾತಿ ಪ್ರಕರಣ, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ ಬೌನ್ಸ್, ಮೋಟಾರ ಅಪಘಾತ ಪರಿಹಾರ, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಪ್ರಕರಣಗಳು, ಪಿತ್ರಾರ್ಜಿತ ಆಸ್ತಿಯಲ್ಲಿನ ಪಾಲುಗಾರಿಕೆ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದರು.
ಉಚಿತ ಜನನ ಪ್ರಮಾಣ ಪತ್ರ: ಶಾಲಾ ಮಕ್ಕಳಿಗೆ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನೀಡಿದರೆ ದಾಖಲೆ ಪರಿಶೀಲಿಸಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಜನನ ಪ್ರಮಾಣ ಪತ್ರ ನೀಡುವ ಉದ್ದೇಶವಿದೆ. ಬೀದರ ಜಿಲ್ಲೆಯಲ್ಲಿ ಸುಮಾರು 17 ಸಾವಿರ ವಿದ್ಯಾರ್ಥಿಗಳಿಗೆ ಜನನ ಪ್ರಮಾಣ ಪತ್ರವನ್ನು ಪ್ರಾಧಿಕಾರದ ಮೂಲಕ ವಿತರಿಸಿದೆ. ಪಾಲಕರು ಹಾಗೂ ಆಯಾ ಕಾಲೇಜಿನ ಸಿಬ್ಬಂದಿ ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು. ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಶೋಭಾ ಇದ್ದರು.