ಬೀದರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲಾ ನ್ಯಾಯಾಲಯ ಸೇರಿದಂತೆ ಎಲ್ಲಾ ತಾಲೂಕಿನ ನ್ಯಾಯಾಲಯಗಳಲ್ಲಿ ಫೆ.10ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕ್ ಅದಾಲತ್ ಕಾರ್ಯಕ್ರಮವನ್ನು ದೇಶದಾದ್ಯಂತ ಏಪ್ರಿಲ್ 14, ಜುಲೈ 14, ಸೆಪ್ಟೆಂಬರ್ 8 ಮತ್ತು ಡಿಸೆಂಬರ್ 8ರಂದು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಅದಾಲತ್‌ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಎನ್‌ಐ ಆ್ಯಕ್ಟ್ ಕಲಂ 138, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಕಾರ್ಮಿಕರ ತಕರಾರು, ವಿದ್ಯುತ್ ಹಾಗೂ ನೀರಿನ ಬಿಲ್‌ಗಳ ಪ್ರಕರಣ, ಇನ್ನಿತರ ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, ವಿವಾಹ ಸಂಬಂಧಿತ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತದೆ.
ಅಲ್ಲದೇ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಕಂಪೌಂಡೆಬಲ್ ಅಪರಾಧಗಳು, ಎನ್‌ಐ ಆ್ಯಕ್ಟ್ ಕಲಂ 138, ಬ್ಯಾಂಕ್ ವಸೂಲಾತಿ ಪ್ರಕರಣ, ಎಂಎಸಿಟಿ ಪ್ರಕರಣ, ಕಾರ್ಮಿಕರ ತಕರಾರು ಪ್ರಕರಣ, ವಿದ್ಯುತ್ ಹಾಗೂ ನೀರಿನ ಬಿಲ್‌ಗಳ ಪ್ರಕರಣ, ಕೌಟುಂಬಿಕ ತಕರಾರು ಪ್ರಕರಣ, ಭೂ-ಸ್ವಾಧೀನ ಪ್ರಕರಣ, ನೌಕರರ ಸೇವೆಗಳ ತಕರಾರು, ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಇತರೆ ಸಿವಿಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು
ಹೇಳಿದರು.
ಲೋಕ ಅದಾಲತ್‌ನಲ್ಲಿ ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಳ್ಳುವುದರಿಂದ ಉಭಯ ಪಕ್ಷಗಾರರಿಗೆ ಹಣ ಉಳಿತಾಯದ ಜತೆಗೆ ಮಾನಸಿಕ ನೆಮ್ಮದಿಯೂ ಉಳಿಯಲಿದೆ. ಅಲ್ಲದೇ ಇಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ ನ್ಯಾಯಾಲಯದ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ. ನಂಜುಂಡಯ್ನಾ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ರಾಘವೇಂದ್ರ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಿರ್ಮಲಾದೇವಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ ಉಪಸ್ಥಿತರಿದ್ದರು.
ಪ್ರಕರಣ ವಿಲೇವಾರಿ ಗುರಿ ಬೀದರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2017ರ ಜನವರಿಯಿಂದ ಡಿಸೆಂಬರ್ ವರೆಗೆ ಒಟ್ಟು 14,437 ಪ್ರಕರಣಗಳನ್ನು ವಿಲೇವಾರಿ ಮಾಡಿ, 5.96 ಕೋಟಿ ರೂ. ವಸೂಲಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 20 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದ್ದೇವೆ.
ಎಂ.ಎಸ್ ಪಾಟೀಲ, ಜಿಲ್ಲಾ ನ್ಯಾಯಾಧೀಶ