Advertisement

ರಾಜ್ಯಾದ್ಯಂತ ಹರತಾಳ ಯಶಸ್ವಿ: ಅಲ್ಲಲ್ಲಿ  ಕಲ್ಲೆಸೆತ, ಹಿಂಸಾಚಾರ

06:45 AM Jul 31, 2017 | |

ತಿರುವನಂತಪುರ: ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಹತ್ಯೆ ಪ್ರತಿಭಟಿಸಿ ಬಿಜೆಪಿ ಕರೆ ನೀಡಿದ್ದ ರಾಜ್ಯ ಹರತಾಳ ಸಂಪೂರ್ಣ ಯಶಸ್ವಿಯಾಗಿದೆ. ತಿರುವನಂತಪುರ, ಕೋಟ್ಟೆಯಂ, ಎರ್ನಾಕುಳಂ, ಆಲಪ್ಪುಳ  ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. 

Advertisement

ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಮೆರವಣಿಗೆ ಮಾಡಿದ್ದಾರೆ. ಬಸ್ಸಿಗೆ ಕಲ್ಲೆಸೆದ , ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ  ಘಟನೆಗಳು ವರದಿಯಾಗಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ಓಡಾಡಿವೆ. ದೂರದೂರುಗಳಿಂದ ಬಂದ ಪ್ರಯಾಣಿಕರಿಗೆ ಬಂದ್‌ನಿಂದಾಗಿ ಸಮಸ್ಯೆಯಾಯಿತು. ಬಸ್‌ ಮತ್ತು ಸಾರ್ವಜನಿಕ ವಾಹನಗಳು ಇಲ್ಲದ ಕಾರಣ ಜನರು ರೈಲು ಮತ್ತು ವಿಮಾನ ನಿಲ್ದಾಣದಲ್ಲಿ ತಾಸುಗಟ್ಟಲೆ ಕಾಯಬೇಕಾಯಿತು. 

ಕೊಲ್ಲಂ ಜಿಲ್ಲೆಯ ವೈಕ್ಕಂನಲ್ಲಿ ಬೆಂಗಳೂರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲು ತೂರಿ ಗಾಜು ಪುಡಿ ಮಾಡಿದ್ದಾರೆ. ತಿರುವನಂತಪುರಕ್ಕೆ ಹೋಗುತ್ತಿದ್ದ ಈ ಬಸ್ಸಿನ ಪ್ರಯಾಣವನ್ನು ಕೊಲ್ಲಂಗೆ ಮೊಟಕುಗೊಳಿಸಲಾಯಿತು. ಪ್ರತಿಭಟನೆ ನಿರತರು ವಿವಿಧೆಡೆಗಳಲ್ಲಿ ಪೆಟ್ರೋಲ್‌ ಪಂಪ್‌ಗ್ಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಕೋಟ್ಟೆಯಂನಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದಾಗ ಲಾಠಿ ಚಾರ್ಜ್‌ ಮಾಡಲಾಯಿತು. ಪೊಲೀಸರು ಮತ್ತು ಮಾಧ್ಯಮದವರತ್ತ ಪ್ರತಿಭಟನೆಕಾರರು ಕಲ್ಲು ತೂರಿದ್ದಾರೆ. ತಿರುವನಂತಪುರದಲ್ಲಿ ನಿಷೇಧಾಜ್ಞೆ ಇದ್ದರೂ ಹರತಾಳ ನಡೆದಿದೆ. ನಗರದಲ್ಲಿ ಬಿಗುವಿನ ವಾತಾವರಣ ಇರುವ ಕಾರಣ ಮೂರು ದಿನ ಕರ್ಫ್ಯೂ ವಿಸ್ತರಿಸಲಾಗಿದೆ. 

ಬಿಜೆಪಿ ಕಾರ್ಯವಾಹ ಆಗಿದ್ದ ರಾಜೇಶ್‌ ಎಡವಕೋಡ್‌ ಶನಿವಾರ ರಾತ್ರಿ ಸಂಘದ ಸಭೆಯಲ್ಲಿ ಭಾಗವಹಿಸಿ ಮನೆಗೆ ವಾಪಸು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ್ದಾರೆ. ಅವರ ಎಡಗೈಯನ್ನು ಕತ್ತರಿಸಿ ದೂರ ಎಸೆದಿದ್ದರು. ಇದು ಸಿಪಿಎಂ ಕಾರ್ಯಕರ್ತರ ಕೃತ್ಯ ಎಂದು ಆರೋಪಿಸಿ ಬಿಜೆಪಿ ರಾಜ್ಯಬಂದ್‌ಗೆ ಕರೆ ನೀಡಿದೆ. ಶುಕ್ರವಾರ ಮುಂಜಾನೆ ರಾಜಧಾನಿಯಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಮೇಲೆ ಸಿಪಿಎಂ ಕಾರ್ಯಕರ್ತರು ದಾಳಿ ಮಾಡಿ ಕಿಟಿಕಿ ಗಾಜುಗಳು ಮತ್ತು ಕಾರುಗಳ ಗಾಜುಗಳನ್ನು ಒಡೆದು ಹಾಕಿದ ಘಟನೆ ಬೆನ್ನಿಗೆ ಈ ಹತ್ಯೆ ಸಂಭವಿಸಿದೆ. 

ತಾಳ್ಮೆಗೆ ಮಿತಿಯಿದೆ: ರಾಜ್ಯ ಸರಕಾರವೇ ಹಿಂಸೆಯೆ ಪ್ರಾಯೋಜಕತ್ವ ವಹಿಸಿಕೊಂಡಿರುವುದರಿಂದ ನಿರಂತರವಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಇಷ್ಟರ ತನಕ ನಾವು ತಾಳ್ಮೆ ವಹಿಸಿದ್ದೆವು. ನಮ್ಮ ಪಕ್ಷದ ಕೇಂದ್ರ ಕಚೇರಿಗೆ ದಾಳಿಯಾದಲೂ ಸಂಯಮ ತಪ್ಪಲಿಲ್ಲ. ಆದರೆ ಸರಕಾರ ಮತ್ತು ಸಿಪಿಎಂ ನಮ್ಮ ತಾಳ್ಮೆಯನ್ನೇ ದೌರ್ಬಲ್ಯ ಎಂದು ತಿಳಿದು ಹತ್ಯೆಗಳನ್ನು ಮಾಡುತ್ತಿದೆ. ಹಿಂಸಾಚಾರದ ಮೂಲಕ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ನಿರ್ನಾಮ ಮಾಡುವುದು ಸಿಪಿಎಂ ಉದ್ದೇಶ  ಎಂದು ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ ಗುಡುಗಿದ್ದಾರೆ. 

Advertisement

ರಾಷ್ಟ್ರೀಯ ಮಾನವಾಧಿಕಾರಗಳ ಆಯೋಗ, ಪ್ರಧಾನ ಮಂತ್ರಿ ಕೇಂದ್ರ ಗೃಹ ಸಚಿವರಿಗೆ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ. ಆದರೆ ರಾಜೇಶ್‌ ಹತ್ಯೆ ತನ್ನ ಕಾರ್ಯಕರ್ತರ ಕೃತ್ಯವಲ್ಲ ಎಂದು ಸಿಪಿಎಂ ಸ್ಪಷ್ಟನೆ ನೀಡಿದೆ. ಈ ಕೃತ್ಯದಲ್ಲಿ ಸಿಪಿಎಂ ಪಾತ್ರವಿಲ್ಲ. ಸ್ಥಳೀಯ ಮನಸ್ತಾಪದಿಂದಾಗಿ ಕೃತ್ಯ ಸಂಭವಿಸಿದೆ. ಆದರೆ ಬಿಜೆಪಿ ಎಲ್ಲ ಕೃತ್ಯಗಳನ್ನು ಸಿಪಿಎಂ ತಲೆಗೆ ಕಟ್ಟುತ್ತಿದೆ ಎಂದು ಸಿಪಿಎಂ ತಿರುವನಂತಪುರ ಜಿಲ್ಲಾ ಕಾರ್ಯದರ್ಶಿ ಅಣವೂರು ನಾಗಪ್ಪನ್‌ ಹೇಳಿದ್ದಾರೆ.

ರಾಜನಾಥ್‌ ಕಳವಳ: ಇದೇ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿ ಇದು ಎಷ್ಟು ಮಾತ್ರಕ್ಕೂ ಸಮ್ಮತವಲ್ಲ ಎಂದಿದ್ದಾರೆ.

ರಾಜೇಶ್‌ ಹತ್ಯೆಯಾದ ಘಟನೆ ಬಳಿಕ ಪಿಣರಾಯಿಗೆ ಕರೆ ಮಾಡಿದ ರಜನಾಥ್‌ ಹತ್ಯೆ ಮತ್ತು ಹಿಂಸೆಯನ್ನು ನಿಲ್ಲಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಪಿಣರಾಯಿ  ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.  ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಸ್ಥಳವಿಲ್ಲ ಎನ್ನುವುದನ್ನು ತಿಳಿಸಿದ್ದೇನೆ. ಕೇರಳದ ಕಾನೂನು ಮತ್ತು ಶಿಸ್ತು ಪಾಲನೆ ಹದಗೆಟ್ಟಿರುವ ಕುರಿತು ಮುಖ್ಯಮಂತ್ರಿಯ ಗಮನ ಸೆಳೆದಿದ್ದೇನೆ ಎಂದು ರಾಜನಾಥ್‌ ಹೇಳಿದ್ದಾರೆ. 

ಚೆನ್ನಿತ್ತಲ ಪ್ರತಿಭಟನೆ : ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಮತ್ತು ಕೆಪಿಸಿಸಿ ಅಧ್ಯಕ್ಷ ಎಂ. ಎಂ. ಹಸನ್‌ ಕೋಝಿಕ್ಕೋಡ್‌ನ‌ಲ್ಲಿ ರಾಜಕೀಯ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ರಕ್ತದಾಹದಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ಬಂದಿದೆ. ಎರಡೂ ಪಕ್ಷಗಳು ಹಿಂಸಾಚಾರವನ್ನು ನಿಲ್ಲಿಸಬೇಕೆಂದು ಚೆನ್ನಿತ್ತಲ ಹೇಳಿದ್ದಾರೆ. 

10 ಮಂದಿ ಕಸ್ಟಡಿಗೆ, ವಾಹನ ವಶಕ್ಕೆ
ಆರ್‌ಎಸ್‌ಎಸ್‌ ಇಡಲಕ್ಕೋಡಾಟ್‌ ಶಾಖೆಯ ಕಾರ್ಯವಾಹ ತಿರುವನಂತಪುರ ಕಲ್ಲಂಬಳ್ಳಿ ವಿನಾಯಕ ನಗರದ ಕುನ್ನಿಲ್‌ ವೀಟಿಲ್‌ ರಾಜೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ತಿರುವನಂತಪುರ ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಮುಖ್ಯ ಆರೋ ಪಿಯ ಮನೆಗೆ ಪೊಲೀಸರು ಮುತ್ತಿಗೆ ಹಾಕಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಇಗರ್ಜಿಗೆ ಓಡಿ ಹೋಗಿದ್ದಾನೆ. 

ಇಗರ್ಜಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರು ಈತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು ಈತ ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದೂ ಗೂಂಡಾ ಕಾನೂನು ಪ್ರಕಾರವೂ ಈತನನ್ನು ಈ ಹಿಂದೆ ಬಂಧಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೈ ಯಲು ಬಂದ ವಾಹನವೊಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಪಿಎಂ ಕಾರ್ಯಕರ್ತರನ್ನು ರಕ್ಷಿಸುವ ಯತ್ನ: ಬಿಜೆಪಿ 
ಆದರೆ ಬಿಜೆಪಿ ಇದನ್ನು ಅಲ್ಲಗಳೆದಿದ್ದು, ಸರಕಾರ ಸಿಪಿಎಂ ಕಾರ್ಯಕರ್ತರನ್ನು ಬಚಾವು ಮಾಡಲು ಪುಡಿ ರೌಡಿಗಳನ್ನು ಬಂಧಿಸಿದೆ ಎಂದು ಆರೋಪಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next