Advertisement

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

02:31 PM Oct 18, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (MUDA) ದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ತನಿಖೆ ಆರಂಭವಾಗಿದೆ. ಮೈಸೂರಿನ ಮುಡಾ ಕಚೇರಿ ಮೇಲೆ ದಿಢೀರ್ ಶುಕ್ರವಾರ (ಅ.18) ಇ.ಡಿ ದಾಳಿ ನಡೆಸಿದ್ದು,  ಸುಮಾರು 8 ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

Advertisement

ಮುಡಾದಲ್ಲಿ ಸಾವಿರಾರು ಕೋಟಿ ಹಣಕಾಸಿನ ಅವ್ಯವಹಾರ ನಡೆದಿರುವ ಬಗ್ಗೆ ಇ.ಡಿಗೆ ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ ದೂರು ಸಲ್ಲಿಸಿದ್ದರು.

ಮೂಲ ದಾಖಲೆ ಕೊಡಿ

ಮೊದಲು ನಮಗೆ ಪಾರ್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ‌‌ ಕೊಡಿ. ನಕಲು ಪ್ರತಿ ಬೇಡ, ನಮಗೆ ಮೂಲ ದಾಖಲೆಯೇ ಬೇಕು ಎಂದು ಇಡಿ ಅಧಿಕಾರಿಗಳು ಕೇಳಿದ್ದಾರೆ. ಪಾರ್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ 2004 ರಿಂದ 2023ರವರಗಿನ ಮೂಲ ದಾಖಲೆ ತಕ್ಷಣ ಕೊಡಿ ಎಂದಿದ್ದಾರೆ. ಹೀಗಾಗಿ ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರನ್ನು ದಾಖಲೆ ತರಲು ಹೊರಗೆ ಕಲುಹಿಸಿದರು. 50:50 ವಿಚಾರ ಏನು, ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿದೆ. ನಮಗೆ ಅಂಕಿ ಅಂಶವನ್ನು ಕೊಡಿ ಎಂದು ಆಯುಕ್ತರನ್ನು ಇಡಿ ಅಧಿಕಾರಿಗಳು‌ ಕೇಳಿದ್ದಾರೆ. ಮುಡಾ ಆಯುಕ್ತರು ಇಡಿ ಅಧಿಕಾರಿಗಳ ತಂಡಕ್ಕೆ ವಿವರಣೆ ಕೊಡುತ್ತಿದ್ದಾರೆ.

ಯೋಧರಿಂದ ಭದ್ರತೆ

Advertisement

ಸಿಆರ್ ಪಿಎಫ್ ಯೋಧರ ಭದ್ರತೆಯೊಂದಿಗೆ ಮುಡಾ ಕಚೇರಿಯಲ್ಲಿ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ತಂಡವು ಎರಡು ದಿನಗಳ ಕಾಲ ತನಿಖೆ ನಡೆಸಲಿದೆ.

ಇಡಿ ದಾಳಿ ಕುರಿತು ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಡಿ ಅಧಿಕಾರಿಗಳ ತಂಡ ಮುಡಾಗೆ ಭೇಟಿ ನೀಡಿದೆ. ಅವರು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡುತ್ತೇವೆ. ಇಂದು ಮತ್ತು ನಾಳೆ ಇಡಿ ಅಧಿಕಾರಿಗಳ ತಂಡ ಕಡತಗಳ ಪರಿಶೀಲನೆ ‌‌ನಡೆಸಲಿದೆ. ಇಡಿ ಅಧಿಕಾರಿಗಳು ನಿರ್ದೇಶನ ನೀಡಿದರೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು.

ಮುಡಾ ಕಚೇರಿಗೆ ಬೀಗ

ಮುಡಾ ಕಚೇರಿಗೆ ಬೀಗ ಹಾಕಿ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಯ ಒಳ ಭಾಗದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಮುಖ್ಯದ್ವಾರ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಮುಡಾದಲ್ಲಿ ಸಾರ್ವಜನಿಕ ಕಾರ್ಯಗಳಿಗೆ ಬ್ರೇಕ್ ಬಿದ್ದಿದೆ. ಸಾರ್ವಜನಿಕರು ಒಳ ಪ್ರವೇಶಿಸದಂತೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮುಡಾ ಕಚೇರಿ ಶುಕ್ರವಾರ ಸಂಪೂರ್ಣ ಬಿಕೋ ಎನ್ನುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next