Advertisement

ಉಗ್ರರಿಗೆ ಸಿಂಹಸ್ವಪ್ನ ನ್ಯಾಟ್‌ಗ್ರಿಡ್‌! ಎಲ್ಲಾ ಗುಪ್ತಚರ ಇಲಾಖೆ ಒಟ್ಟಿಗೆ ತರುವ ಪ್ರಯತ್ನ

10:17 PM May 03, 2022 | Team Udayavani |

ಬೆಂಗಳೂರು: ಹವಾಲಾ ವಹಿವಾಟು, ಉಗ್ರರಿಗೆ ಹಣ ಸಹಾಯ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹ ಮಾಡುವ ಸಲುವಾಗಿ ರಾಷ್ಟ್ರೀಯ ಡೇಟಾಬೇಸ್‌ ಅನ್ನು ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.

Advertisement

ಇಲ್ಲಿನ ರಾಷ್ಟ್ರೀಯ ಇಂಟೆಲಿಜೆನ್ಸ್‌ ಗ್ರಿಡ್‌(ನ್ಯಾಟ್‌ಗ್ರಿಡ್‌)ಗೆ ಚಾಲನೆ ನೀಡಿದ ಅವರು, ಮೋದಿ ಸರ್ಕಾರವು ಭಯೋತ್ಪಾದಕರ ವಿರುದ್ಧ ಮೊದಲ ದಿನದಿಂದಲೂ ಶೂನ್ಯ ಸಹಿಷ್ಣುತೆ ಹೊಂದಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಸದ್ಯದಲ್ಲೇ ಹವಾಲಾ ವಹಿವಾಟು, ಖೋಟಾ ನೋಟು, ಡ್ರಗ್ಸ್‌ ದಂಧೆ, ಬಾಂಬ್‌ ಬೆದರಿಕೆ, ಅಕ್ರಮ ಶಸ್ತ್ರಾಸ್ತ್ರ ಸಾಗಾಟ ಸೇರಿದಂತೆ ಇತರೆ ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ನಿಗಾಕ್ಕಾಗಿ ಒಂದು ರಾಷ್ಟ್ರೀಯ ಮಟ್ಟದಲ್ಲಿ ಡೇಟಾಬೇಸ್‌ ಅನ್ನು ಸ್ಥಾಪಿಸಲಿದೆ. ಹಾಗೆಯೇ, ಗುಪ್ತಚರ ಮತ್ತು ಕಾನೂನು ಸಂಸ್ಥೆಗಳು ಇಂಥ ಮಾಹಿತಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಬಳಸಿಕೊಳ್ಳಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳ ತನಿಖೆಯ ಹಾದಿಯೇ ಸಂಪೂರ್ಣ ಬದಲಾಗಲಿದೆ ಎಂದು ಅಮಿತ್‌ ಶಾ ಅವರು ತಿಳಿಸಿದರು. ಜತೆಗೆ, ಈ ನಿಟ್ಟಿನಲ್ಲಿ ನ್ಯಾಟ್‌ಗ್ರಿಡ್‌ ಅತ್ಯಂತ ಸಮರ್ಥವಾಗಿ ಕೆಲಸ ಮಾಡಲಿದೆ ಎಂದು ಆಶಿಸಿದರು.

ಯುಪಿಎ ಕಾಲದ ಯೋಜನೆ
ಇದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಕನಸಿನ ಕೂಸು. ಆದರೆ, ಅವರು ಅಧಿಕಾರದಲ್ಲಿದ್ದಾಗ ಸ್ಥಾಪಿಸಲು ಆಗಲಿಲ್ಲ. ಈ ಯೋಜನೆಗಾಗಿ 2011ರಲ್ಲಿ ಯುಪಿಎ ಸರ್ಕಾರ 3,400 ಕೋಟಿ ರೂ.ಗಳನ್ನು ನೀಡಿತ್ತು. ಆದರೆ, ಯೋಜನೆ ಆರಂಭವಾಗಲೇ ಇಲ್ಲ. ಬಳಿಕ ಅಮಿತ್‌ ಶಾ ಅವರು, ವಿಶೇಷ ಆಸ್ಥೆ ಮೇರೆಗೆ ಇದನ್ನು ರೂಪಿಸಿದ್ದಾರೆ.

ಏನಿದು ನ್ಯಾಟ್‌ಗ್ರಿಡ್‌?
ದೇಶದಲ್ಲಿರುವ ವಿವಿಧ ಗುಪ್ತಚರ ಇಲಾಖೆಗಳನ್ನೊಳಗೊಂಡ ಸಂಸ್ಥೆ ಇದು. ಇದರಲ್ಲಿ 21 ಸಂಸ್ಥೆಗಳಿದ್ದು, ಇವುಗಳು ಸಂಗ್ರಹಿಸಿದ ಭಯೋತ್ಪಾದನೆ ಸೇರಿದಂತೆ ನಾನಾ ಅಪರಾಧದ ಮಾಹಿತಿಯನ್ನು ಒಂದೆಡೆ ಕ್ರೊಢೀಕರಿಸಲಾಗುತ್ತದೆ. ಈ ಮಾಹಿತಿಯನ್ನು ಈ ಎಲ್ಲಾ ಸಂಸ್ಥೆಗಳು ಬಳಸಿಕೊಳ್ಳಬಹುದು. ಅಷ್ಟೇ ಅಲ್ಲ, ಗುಪ್ತಚರ ಇಲಾಖೆ ಜತೆಗೆ, ಸ್ಥಳೀಯ ಪೊಲೀಸರು, ಕಂದಾಯ ಮತ್ತು ಕಸ್ಟಮ್‌ ಅಧಿಕಾರಿಗಳೂ ಬಳಕೆ ಮಾಡಿಕೊಳ್ಳಬಹುದು. ಸದ್ಯ ಇದರ ದಾಖಲೆಗಳ ರಿಕವರಿ ಕೇಂದ್ರ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಅಲ್ಲದೆ, ಮಾಹಿತಿ ಸಂಗ್ರಹಕ್ಕಾಗಿ ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ.

Advertisement

ಆರಂಭದಲ್ಲಿ ಈ ಯೋಜನೆಗೆ ವಿರೋಧಗಳು ಉಂಟಾಗಿದ್ದವು. ಅಂದರೆ, ಭಯೋತ್ಪಾದನೆ ಸೇರಿದಂತೆ ಅತ್ಯಂತ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಬಹುದು ಎಂಬ ಆತಂಕವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next