ಬೆಂಗಳೂರು: ದೇಶದ , ಏಕತೆ, ಅಖಂಡತೆ, ಸಮಗ್ರತೆ ನಮ್ಮ ಆದ್ಯತೆಯಾಗಿದ್ದು, ಇವುಗಳನ್ನು ಕಾಪಾಡಲು ಸಂಕಲ್ಪ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಐಕ್ಯತಾ ಪ್ರಮಾಣವಚನವನ್ನು ಬೋಧಿಸಿ, ಹಲವಾರು ಭಾಷೆಗಳು, ಸಾಂಸ್ಕೃತಿಕ ಹಿನ್ನೆಲೆ ಮತ್ತು ಸಂಸ್ಕೃತಿಗಳಿಂದ ಕೂಡಿರುವ ದೇಶ. ಭಾರತ ಒಗ್ಗಟ್ಟಾಗಿ, ಒಕ್ಕೂಟವಾಗಿ, ಸ್ವತಂತ್ರವಾಗಿ 75 ವರ್ಷಗಳ ಕಾಲ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಬಂದಿರುವುದು ಬಹಳ ದೊಡ್ಡ ಸಾಧನೆ ಎಂದು ಹೇಳಿದರು.
ನಾವು ನಂಬಿರುವ ಸತ್ಯ ಮತ್ತು ಅಹಿಂಸೆ ಮುಂದುವರಿಯಬೇಕು. ಯಾವುದೇ ಸಾಮಾಜಿಕ, ಆರ್ಥಿಕ ,ರಾಜಕೀಯ, ಧಾರ್ಮಿಕ ಪರಿಸ್ಥಿತಿಯಲ್ಲಿ ಅಹಿಂಸೆಯ ಮಾರ್ಗವನ್ನು ತೊರೆಯದೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಇದನ್ನೂ ಓದಿ:ನಾಚಿಕೆಗೇಡು!; ಕೃಷಿ ಕಾಯ್ದೆ ಹಿಂಪಡೆದುದಕ್ಕೆ ನಟಿ ಕಂಗನಾ ಆಕ್ರೋಶ
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಅಖಂಡತೆ, ಏಕತೆ ಹಾಗೂ ಪ್ರಗತಿ ಸಾಧಿಸಲು ಹಲವಾರು ಪ್ರಯೋಗ ಮತ್ತು ಪ್ರಗತಿಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅವರಿಂದ ಭಾರತದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೇರಿದೆ. ಅವರ ಕಾರ್ಯಕ್ರಮಗಳನ್ನು ಯಶಸ್ವಿ ಮಾಡುವ ಮೂಲಕ ಕೈಜೋಡಿಸೋಣ ಎಂದರು.