ರಾಯಚೂರು: ಮಂತ್ರಾಲಯದಿಂದ ಆರ್‌ಟಿಒ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಸರ್ವೇ ಕಾರ್ಯ ನಡೆಸಿದರು.
36 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ಮಿಸುವ ಗುರಿಯಿದ್ದು, ಮಂತ್ರಾಲಯದಿಂದ ತುಂಟಾಪುರದವರೆಗೆ ಬಹುತೇಕ ರಸ್ತೆ ಕಾಮಗಾರಿ ಮುಗಿದಿದೆ. ತುಂಟಾಪುರದಿಂದ ಆರ್‌ಟಿಒ ವೃತ್ತದವರೆಗೆ ಬಾಕಿ ಕಾಮಗಾರಿ ನಿರ್ವಹಣೆಗಾಗಿ ಅ ಧಿಕಾರಿಗಳು ಸ್ಥಳ ಸರ್ವೆ ಮಾಡಿದರು. ಇದಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾದ ಕಾರಣ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ಮಾತುಕತೆ ನಡೆಸುವ ಮೂಲಕ ಸರ್ವೇ ಕಾರ್ಯ ಮುಂದುವರಿಸಿದರು.
ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಬಾಕಿ ಕಾಮಗಾರಿ ಶೀಘ್ರ ಕೈಗೆತ್ತಿಕೊಂಡು ಮುಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಸರ್ವೇ ಕಾರ್ಯ ಮುಂದುವರಿಸಲಾಯಿತು. ಹೊಸಪೇಟೆ ಎಇಇ ಕೆ.ರಮೇಶ ಮಾತನಾಡಿ, ಭೂ ಮಾಲೀಕರು ಸೂಕ್ತ ದಾಖಲಾತಿ ಇದ್ದರೆ ಪರಿಹಾರ ಸಿಗಲಿದೆ ಎಂದರು.
ಇದನ್ನೊಪ್ಪದ ಜಮೀನು ಮಾಲೀಕರು, ಭೂ ಮಾಲೀಕರಿಗೆ ಪರಿಹಾರ ನೀಡಿದ ಬಳಿಕವೇ ಕೆಲಸ ಆರಂಭಿಸಬೇಕು. ಆದರೆ, ಪರಿಹಾರ ನೀಡದ ಕಾರಣ ನ್ಯಾಯಾಲಯ ಮೊರೆ ಹೋಗಿದ್ದು, ಪರಿಹಾರ ನೀಡಿದ ನಂತರವೇ ಸರ್ವೇ ಆರಂಭಿಸುವಂತೆ ಕೋರ್ಟ್ ಆದೇಶ ನೀಡಿದೆ. ಆದರೆ, ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆದೇಶ ಉಲ್ಲಂಘಿಸಿ ಸರ್ವೇ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಡಳಿತ ಭೂ ಮಾಲೀಕರ ಮೇಲೆ ದೌರ್ಜನ್ಯ ಎಸಗುತ್ತಿದೆ. ತಾಲೂಕಿನ ಯರಗೇರಾ ಗ್ರಾಮದ ರೈತರ ಸ್ಥಳ ಕಬಳಿಸಿ ರಸ್ತೆ ನಿರ್ಮಿಸಿದ್ದು, ಪರಿಹಾರ ಕೇಳಿದ ರೈತರನ್ನು ಜೈಲಿಗೆ ಹಾಕಲಾಗಿದೆ ಎಂದು ದೂರಿದರು. ಅಧಿಕಾರಿಗಳು ಪೊಲೀಸ್ ಬಂದೋಬಸ್ತನಲ್ಲಿ ಸರ್ವೇ ಕಾರ್ಯ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ವಿವಿಧ ಠಾಣೆಗಳ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.