ಕುಮಟಾ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪತ ಕಾಮಗಾರಿ ಕೈಗೊಂಡ ಐಆರ್ ಬಿ ಒಂದಿಲ್ಲೊಂದು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಸಂಚಕಾರವನ್ನುಂಟು ಮಾಡುತ್ತಿದ್ದು, ಜನರ ವಿರೊಧದ ನಡೆಯೆಯೂ ಮತ್ತದೇ ಕಾಮಗಾರಿಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ವಿಷಾದಕರ.
ತಾಲೂಕಿನ ಹಂದಿಗೋಣ ಶಾಲೆಯಿಂದ ಅಳ್ವೆಕೋಡಿಯ ವರೆಗೆ ರಸ್ತೆ ಕಾಮಗಾರಿ ನಡೆಸಿರುವ ಕಂಪನಿ, ಈ ಭಾಗದಲ್ಲಿ ಇದುವರೆಗೂ ಸರ್ವಿಸ್ ರಸ್ತೆಯನ್ನು ಪೂರ್ಣಗೊಳಿಸಿಲ್ಲ.ಅಲ್ಲಲ್ಲಿ ಅಗೆದು, ಕೆಲವು ಕಡೆ ಜಲ್ಲಿಕಲ್ಲು, ಮಣ್ಣುಗಳನ್ನು ಹಾಕಿ ಜನ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಓಡಾಟಕ್ಕೆ ಸರ್ವಿಸ್ ರಸ್ತೆ ಇಲ್ಲದ ಕಾರಣ ಹೆದ್ದಾರಿಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೆದ್ದಾರಿ ಪಕ್ಕದಲ್ಲಿ ಶಾಲೆ ಕೂಡ ಇದ್ದು, ಇಲ್ಲಿಗೆ ಬರುವ ಮಕ್ಕಳು ಅಲ್ಲಲ್ಲಿ ಬಿದ್ದು, ಎದ್ದು ಶಾಲೆಗೆ ಬರುವುದು ಪ್ರತಿನಿತ್ಯದ ಗೋಳಾಗಿದೆ.
ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಚರಂಡಿ ಕಾಮಗಾರಿಯೂ ನೆನೆಗುದಿಗೆ ಬಿದ್ದಿದ್ದು, ಇದರಿಂದ ಸರ್ವಿಸ್ ರಸ್ತೆಯೂ ಇಲ್ಲದಂತಾಗಿದೆ.
ಚರಂಡಿ ಕಾಮಗಾರಿಗಾಗಿ ಕಾಂಕ್ರಿಟ್ ಗೋಡೆಗಳನ್ನು ನಿರ್ಮಿಸಲು ಬಳಸಿದ ಕಬ್ಬಿಣದ ರಾಡ್ ಮೇಲ್ಬಾಗದಲ್ಲಿ ಹಾಗೆಯೇ ಉಳಿದುಕೊಂಡಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಓಡಾಡುವಾಗ ತೊಂದರೆಯಾಗಲಿದೆ. ಇನ್ನು ಕೆಲವು ಕಡೆ ಚರಂಡಿಗಳನ್ನು ಮುಚ್ಚದೆ ಬಿಟ್ಟಿರುವುದರಿಂದ ರಾತ್ರಿ ವೇಳೆ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಟೋಯಿಂಗ್ ಮಾಫಿಯಾಕ್ಕೆ ಕಡಿವಾಣ ಬೀಳುವುದು ಡೌಟು?
ಸ್ಥಳೀಯರು ಹೇಳುವಂತೆ ಒಂದು ವರ್ಷದಿಂದ ಈ ವರೆಗೆ ಸರಿಯಾಗಿ ಒಂದೆಡೆ ಕಾಮಗಾರಿ ಮಾಡದೆ, ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ದಿನ ದೂಡುತ್ತಿದ್ದು ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತದೆ. ಹೀಗಾಗಿ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಿಬೇಕೆಂದು ಆಗ್ರಹಿಸಿದ್ದಾರೆ.