ಕಲಬುರಗಿ: ಜಿಲ್ಲೆಯ ಮೂಲಕ ಹಾಯ್ದು ಹೋಗುವ ವಿಜಯಪುರ-ಕಲಬುರಗಿ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ-50 ಸೇರಿದಂತೆ 10,904 ಕೋಟಿ ರೂ. ಮೊತ್ತದ ಕರ್ನಾಟಕದ 33 ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳಿಗೆ ಶನಿವಾರ ಕೇಂದ್ರ ರಸ್ತೆ ಸಾರಿಗೆ, ರಾಷ್ಟೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ವರ್ಚ್ಯುವಲ್ ಮೀಟಿಂಗ್ ಮೂಲಕ ಚಾಲನೆ ನೀಡಿದರು.
25 ಶಂಕುಸ್ಥಾಪನೆ ಮತ್ತು ಎಂಟು ಕಾಮಗಾರಿಗಳು ರಾಷ್ಟ್ರಕ್ಕೆ ಸಮರ್ಪಣೆ ಸೇರಿದಂತೆ ರಾಜ್ಯದ 33 ರಾಷ್ಟ್ರೀಯ ಹೆದ್ದಾರಿಗಳ 1,197 ಕಿಮೀ ಉದ್ದದ ರಸ್ತೆಗೆ 10,904 ಕೋಟಿ ರೂ. ವೆಚ್ಚ ವ್ಯಯ ಮಾಡಲಾಗುತ್ತಿದ್ದು, ಶಂಕುಸ್ಥಾಪನೆ ನೆರವೇರಿಸಿರುವ ಕಾಮಗಾರಿಗಳು 2022ರ ಹೊತ್ತಿಗೆ ಪೂರ್ಣಗೊಳ್ಳಲಿವೆ ಎಂದರು.
ದಕ್ಷಿಣ ಭಾಗದಲ್ಲಿ ಕರ್ನಾಟಕ ರಾಜ್ಯವು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಈಗ ಚಾಲನೆ ನೀಡಿದ ಅನೇಕ ಯೋಜನೆಗಳು ಕರ್ನಾಟಕದವಿವಿಧ ಭಾಗಗಳಿಗೆ ಸಂಪರ್ಕ ಸಾಧಿ ಸಲು ಸಹಕಾರಿ ಆಗುವುದಲ್ಲದೇ ರಾಜ್ಯದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ. ಈಗಾಗಲೇ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮುಂದಿನಹಂತದ ಅನುದಾನ ಬಿಡುಗಡೆಗೆ ಕೂಡಲೇ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಬೇಕೆಂದು ರಾಜ್ಯಸರ್ಕಾರಕ್ಕೆ ಸೂಚಿಸಿದರು.
ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಶಿರಾಡಿ ಘಾಟ್ ಸುರಂಗ ಮಾರ್ಗ, ಚಾರ್ಮುಡಿ ಘಾಟ್, ಬೆಂಗಳೂರು-ತುಮಕೂರು ಅಷ್ಠ ಪಥದ ರಸ್ತೆ ಯೋಜನೆಗೆ ಅನುಮೋದನೆ ನೀಡಬೇಕು. ಇತ್ತೀಚೆಗೆ ನೆರೆ ಹಾವಳಿಯಿಂದ ಹಾನಿಯಾದ ಹೆದ್ದಾರಿಗಳ ದುರಸ್ತಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಕಲಬುರಗಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ ವಿಡಿಯೋ ಕಾನ್ಫೆರೆನ್ ನಲ್ಲಿ ಸಂಸದ ಡಾ| ಉಮೇಶ ಜಾಧವ, ಶಾಸಕರಾದ ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಡಾ|ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ
ಬಿ.ಜಿ. ಪಾಟೀಲ, ಶಶೀಲ್ ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ನಿಯಮಿತ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಎನ್‌ಎಚ್‌ಎಐ ಅನುಷ್ಠಾನ ಕಚೇರಿ ವ್ಯವಸ್ಥಾಪಕ ಚಾರ್ಲ್ಸ್ ಜೆ., ಇಂಜಿನಿಯರ್ ಪ್ರದೀಪ ಹಿರೇಮಠ ಪಾಲ್ಗೊಂಡಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 22ರೂ.ಗಳಿದ್ದು, ಕೇಂದ್ರಸರ್ಕಾರ 34ರೂ. ನೀಡಿ ಖರೀದಿಸುತ್ತಿದೆ. ಇದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಹೊಸ ಎಥೆನಾಲ್ ಉತ್ಪಾದನೆ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಕಬ್ಬುಬೆಳೆಯುವುದರಿಂದ ಇಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಿದ್ದು, ಪೆಟ್ರೋಲ್‌ಗೆ ಪರ್ಯಾಯವಾಗಿ ಎಥೆನಾಲ್ ಬಳಕೆಗೆ ಕರ್ನಾಟಕ ಸರ್ಕಾರ ಮುಂದಾಗಬೇಕು.
-ನಿತಿನ್ ಗಡ್ಕರಿ, ಕೇಂದ್ರ ಸಚಿವ