Advertisement

ರಾಷ್ಟ್ರೀಯ ಹೆದ್ದಾರಿಯೋ, ಸಾವಿನ ಹೆದ್ದಾರಿಯೋ?

05:29 PM Feb 11, 2021 | Team Udayavani |

ಲಿಂಗಸುಗೂರು: ಈ ರಸ್ತೆಯಲ್ಲಿ ನಡೆದಿರುವ ಅಪಘಾತಗಳಿಗೂ ಲೆಕ್ಕವಿಲ್ಲ, ಕಳೆದಕೊಂಡು ಜೀವಗಳ ಲೆಕ್ಕವೂ ಇಲ್ಲ. ಇದೊಂದು ಜೀವ ಹಿಂಡುವ ರಾಷ್ಟ್ರೀಯ ಹೆದ್ದಾರಿ. ಇದು ತಾಲೂಕಿನಲ್ಲಿ ಅತಿ ಅಪಘಾತವಾಗುವ ಗೊಲ್ಲಪಲ್ಲಿ ಘಾಟ್‌! ಲಿಂಗಸುಗೂರು, ಗುರುಗುಂಟಾ, ಗೋಲಪಲ್ಲಿ, ತಿಂಥಣಿ ಬ್ರಿಜ್‌ ಮೂಲಕ ಹಾದು ಹೋಗಿರುವ ಬೀದರ್‌ -ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150(ಎ), ಸದಾ ಅಪಘಾತಗಳಿಗೆ ರಹದಾರಿ ನೀಡುವ ರಕ್ಕಸ ಹೆದ್ದಾರಿಯಾಗಿದೆ.

Advertisement

ಲಿಂಗಸುಗೂರಿನಿಂದ ತಿಂಥಣಿ ಬ್ರಿಜ್‌ ಮಧ್ಯೆ ಅಂದಾಜು 30 ಕಿ.ಮೀ ಅಂತರವಿದೆ. ಗುರುಗುಂಟಾದಿಂದ ತಿಂಥಣಿ ಬ್ರಿಜ್‌ಗೆ 11 ಕಿ.ಮೀ. ರಸ್ತೆಯ ಪ್ರಯಾಣ ಗೋಲಪಲ್ಲಿ, ಪೈದೊಡ್ಡಿ ಕ್ರಾಸ್‌ ಮೂಲಕ ಘಟ್ಟಪ್ರದೇಶದ ಇಳಿಜಾರಿನಲ್ಲಿ 20 ನಿಮಿಷದ ಪ್ರಯಾಣ ಘಟ್ಟ ಪ್ರದೇಶದ ಬೆಟ್ಟ-ಗುಡ್ಡ, ಹಳ್ಳ-ಕೊಳ್ಳಗಳ ಮಧ್ಯೆ ಹೆದ್ದಾರಿ ಹಾದು ಹೋಗಿದೆ. ಬೆಟ್ಟ-ಗುಡ್ಡಗಳ ತಿರುವಿನಲ್ಲಿ ವಾಹಗಳ ಎದುರು-ಬದುರಾದರೆ ಅಪಘಾತ ಸಂಭವಿಸುವ ಆತಂಕ ಚಾಲಕರದು.

ಇಕ್ಕಟ್ಟು ರಸ್ತೆ: ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಗಲ 5.5 ಮೀಟರ್‌ ಇದೆ. ಬಸ್‌-ಲಾರಿಗಳ ಎದುರಾದರೆ ಮಗ್ಗಲಕ್ಕೆ ವಾಹನಗಳ ತೆಗೆದುಕೊಳ್ಳಲು ಇಕ್ಕಟ್ಟು ಇದೆ. ಇನ್ನೂ ಗೋಲಪಲ್ಲಿ ದಿಬ್ಬದಲ್ಲಿ ಏರಿ, ಇಳಿದರೆ ಚಾಲಕರು ನಿಟ್ಟುಸಿರು ಬಿಡುತ್ತಾರೆ. ವಾಹನದ ಚಾಲನೆ ನಿಧಾನವಾದರೇ ದಿಬ್ಬ ಏರುವುದಿಲ್ಲ ವೇಗವಾಗಿ ಹೋದರೆ ಇಕ್ಕಟ್ಟು ರಸ್ತೆ ಎದುರಿಗೆ ವಾಹನಗಳ ಬಂದರೆ ನಿಯಂತ್ರಣ ಹೇಗೆಂಬ ಗೊಂದಲ ಚಾಲಕರಲ್ಲಿ ಉಂಟಾಗುತ್ತದೆ.

ಗೊಂದಲದಿಂದ ಅಪಘಾತಗಳ ಸಂಭವಿಸುತ್ತವೆ. ವಾರದೊಳಗೆ ಒಂದೇ ಸ್ಥಳದಲ್ಲಿ ಎರಡು ಅಪಘಾತ ಸಂಭವಿಸಿ ಇರ್ವರು ವಿದ್ಯಾರ್ಥಿಗಳ ಹಾಗೂ ಓರ್ವ ಛಾಯಾಗ್ರಾಹಕ ಜೀವ ಕಳೆದುಕೊಂಡರೆ ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌ ಅಪಘಾತದಲ್ಲಿ ಪಾರಾಗಿ ನಾಲ್ಕಾರು ಜನರು ಕೈ, ಕಾಲು ಮುರಿದಿವೆ. ಸರಣಿ ಅಪಘಾತಗಳು ಇಲ್ಲಿ ಹೆಚ್ಚಾಗಿ ಸಂಭವಿಸುತ್ತಿವೆ.

ಕಾಮಗಾರಿ ವಿಳಂಬ: ಈಗಾಗಲೇ ಗುರುಗುಂಟಾದಿಂದ ಶಹಪುರದ ಮುಡಬೂಳದವರೆಗೂ 89 ಕಿ.ಮೀದಿಂದ 140 ಕಿ.ಮೀ ವರೆಗೆ 230 ಕೋಟಿ ವೆಚ್ಚದಲ್ಲಿ 10 ಮೀಟರ್‌ ಅಗಲದ ರಸ್ತೆಯ ನಿರ್ಮಾಣದ ವಿಸ್ತೃತ ವರದಿ ಇದೆ. ಗುರುಗುಂಟಾ-ತಿಂಥಣಿ ಬ್ರಿಜ್‌ ಮಧ್ಯೆ ಮೀಸಲು ಅರಣ್ಯದಲ್ಲಿ ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆಯಬೇಕಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿದೆ.

Advertisement

ಲಿಂಗಸುಗೂರು-ತಿಂಥಣಿ ಬ್ರಿಜ್‌ ಮಧ್ಯೆದ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಇಕ್ಕಟ್ಟಾದ ರಸ್ತೆಯೇ ಪ್ರಮುಖ ಕಾರಣ. ಅಪಘಾತಗಳು ಸಂಭವಿಸಿ ಜೀವಗಳು ಉರುಳುತ್ತಿವೆ. ಅಪಘಾತಗಳ ಘಟಿಸಿದಾಗ ಸಂಚಾರ ಸ್ಥಗಿತಗೊಂಡು ಗಂಟೆಗಟ್ಟಲೇ ರಸ್ತೆಯಲ್ಲಿ ವಾಹನಗಳು ನಿಲ್ಲುತ್ತಿವೆ. ಸಂಚಾರ ಸರಿಪಡಿಸಲು ಪೊಲೀಸರು ಹಗಲು-ರಾತ್ರಿ ಹೆಣಾಗುತ್ತಾರೆ ಅಲ್ಲದೇ ಕೆಲ ವರ್ಷಗಳ ಹಿಂದೆ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡುವ ಕರ್ತವ್ಯದಲ್ಲಿದ್ದ ಪೊಲೀಸ್‌ ಪೇದೆ ಲಾರಿ ಡಿಕ್ಕಿಯಾಗಿ ಬ್ಯಾರಿಕೇಡ್‌ ಕಂದಕಕ್ಕೆ ಉರುಳಿದ್ದರೆ ಪೇದೆಯ ಕೈ, ಕಾಲು ತಲೆಗೆ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದ. ಯಮರೂಪಿ ರಸ್ತೆಯಲ್ಲಿ ಪೊಲೀಸರೂ ಭಯದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಭೀಕರ ಅಪಘಾತಗಳು ಘಟಿಸಿದರೂ ಇಲ್ಲಿನ ಜನಪ್ರತಿನಿಧಿಗಳು , ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ಹೆದ್ದಾರಿ ಹಾಳಾಗಿದ್ದರಿಂದ ನಿಯಮದಂತೆ ಡಾಂಬರೀಕರಣ ನಡೆದಿದೆ. ಗುರುಗುಂಟಾದ 89 ಕಿ.ಮೀಯಿಂದ 140 ಕಿ.ಮೀ ವರೆಗೆ 230 ಕೋಟಿ ವೆಚ್ಚದಲ್ಲಿ 10 ಮೀಟರ್‌ ರಸ್ತೆ ಅಗಲೀಕರಣ ಮಾಡುವ ಯೋಜನೆ ಇದೆ. ಮೀಸಲು ಅರಣ್ಯ ಇರುವುದರಿಂದ ಕಾಮಗಾರಿಗೆ ಆರಂಭ ವಿಳಂಬವಾಗುತ್ತಿದೆ.
ವಿಜಯ ಕುಮಾರ ಪಾಟೀಲ್‌,
ಎಇಇ ರಾಷ್ಟ್ರೀಯ ಹೆದ್ದಾರಿ ವಿಜಯಪುರ

ಇಕ್ಕಟ್ಟಾದ ರಸ್ತೆಯನ್ನು ಆದಷ್ಟು ಬೇಗ ಅಗಲೀಕರಣ ಮಾಡಲು ಸೂಚಿಸಿದೆ. ರಸ್ತೆಯಲ್ಲಿನ ತಿರುವು, ಹಂಪ್ಸ್‌, ಸೇತುವೆ ಇರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಬ್ಲಿಂಕ್ಸ್‌ ಲೈಟ್ಸ್‌, ರೇಡಿಯಂ ಪಟ್ಟಿ ಹಾಕುವಂತೆ ಎನ್‌ ಎಚ್‌ ಅಧಿ ಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತ ವಲಯದಲ್ಲಿ ಪೋಲಿಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಶೀಘ್ರದಲ್ಲಿ ರಸ್ತೆಯನ್ನು 10 ಮೀಟರ್‌ ವಿಸ್ತರಣೆ ಮಾಡಿ ಕಾಮಗಾರಿ ನಡೆಯಲಿದೆ.
ಮಹಾಂತೇಶ ಸಜ್ಜನ್‌,
ಸಿಪಿಐ ಲಿಂಗಸುಗೂರು

*ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next