ರಾ.ಹೆ. 66ರ ಕರಾವಳಿ ಬೈಪಾಸ್‌ನ ಶಾರದಾ ಹೊಟೇಲ್ ಎದುರುಗಡೆ ಆಳವಾದ ಗುಂಡಿಗಳಿದ್ದು ಅವುಗಳನ್ನು ಮುಚ್ಚುವ ಪ್ರಯತ್ನ ಮಳೆಯ ನಡುವೆಯೇ ಸಾಗಿತ್ತು. ಆದರೆ ಅದು ಪ್ರಯೋಜನಕ್ಕೆ ಬಂದಿಲ್ಲ. ರವಿವಾರ ಈ ಗುಂಡಿಗಳು ಮತ್ತಷ್ಟು ಆಳವಾಗಿವೆ. ಕೆಲವು ದ್ವಿಚಕ್ರ ವಾಹನ ಸವಾರರು ಅಪಘಾತದಿಂದ ಸ್ವಲ್ಪದಲ್ಲೇ ಬಚಾವಾದರು.
ವಾಹನಗಳು ವೇಗವಾಗಿ ಸಾಗುವಾಗ ಧುತ್ತನೆ ಎದುರಾಗುವ ಈ ಗುಂಡಿಗಳಿಂದಾಗಿ ವಾಹನ ಇಳಿಸಿದರೆ ನಿಯಂತ್ರಣ ಕಳೆದುಕೊಳ್ಳುವ, ಬ್ರೇಕ್ ಹಾಕಿದರೆ ಹಿಂದಿನಿಂದ ಬರುವ ವಾಹನಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆಗಳು ಅಧಿಕ. ಗುಂಡಿಗಳನ್ನು ತಪ್ಪಿಸಲು ಹೋದರೂ ಕಷ್ಟ. ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಈ ಗುಂಡಿಗಳ ಗಾತ್ರ ಮತ್ತು ವಿಸ್ತಾರ ಹೆಚ್ಚಾಗುತ್ತಿದೆ.
Advertisement
ಟೈಗರ್ ಸರ್ಕಲ್-ಎಂಐಟಿಟೈಗರ್ ಸರ್ಕಲ್‌ನಿಂದ ಎಂಐಟಿವರೆಗಿನ ಹೆದ್ದಾರಿ ಭಾಗದ ಅಲ್ಲಲ್ಲಿ ಹೊಂಡಗಳಾಗಿವೆ. ರಾಧಾ ಮೆಡಿಕಲ್ಸ್ ಎದುರಿನ ಭಾಗದಲ್ಲಿ ಈಗಲೇ ದೊಡ್ಡ ಹೊಂಡಗಳುಂಟಾಗಿವೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಚರಂಡಿ ನೀರು ಪ್ರವಾಹೋಪಾದಿಯಾಗಿ ಮುಖ್ಯರಸ್ತೆಯನ್ನು ಸೇರುತ್ತದೆ. ಟೈಗರ್ ಸರ್ಕಲ್‌ನಿಂದಲೂ ಮಳೆನೀರು ರಸ್ತೆ ಯಲ್ಲಿಯೇ ಹರಿಯಲು ಆರಂಭ ವಾಗುತ್ತದೆ. ಇಲ್ಲಿ ನಡೆದು ಕೊಂಡು ಹೋಗುವವರ ಪಾಡು ಹೇಳ ತೀರದು. ಚರಂಡಿಯೂ ಇಲ್ಲ, ಪುಟ್‌ಪಾತ್ ಇಲ್ಲ, ಪಾರ್ಕಿಂಗ್ ಇಲ್ಲ, ರಸ್ತೆಯೂ ಇಲ್ಲ ಎನ್ನುವ ಸ್ಥಿತಿ ಇದೆ.
ಪರ್ಕಳ: ಮುಗಿಯದ ಗೋಳು
ಕಿರಿದಾದ ರಸ್ತೆ, ಇಕ್ಕಟ್ಟಾದ ಬಸ್‌ನಿಲ್ದಾಣದಿಂದ ಸಮಸ್ಯೆ ಎದುರಿಸುತ್ತಿರುವ ಪರ್ಕಳದಲ್ಲಿ ಈಗ ಹೊಂಡಗಳ ಕಿರಿಕಿರಿ. ಹೊಂಡ ಗುಂಡಿಗಳ ಕಾರಣ ದಿಂದಾಗಿ ಇಲ್ಲೀಗ ವಾಹನ ಚಾಲನೆ ಭಾರೀ ಸವಾಲು ತಂದೊಡ್ಡುತ್ತಿದೆ. ಚರಂಡಿಯೂ ಅಸಮರ್ಪಕವಾಗಿದೆ. ಕೊಳಚೆ ನೀರು ಕೂಡ ರಸ್ತೆಯಲ್ಲಿಯೇ ಉದ್ದಕ್ಕೂ ಹರಿಯುತ್ತದೆ. ಮಲ್ಪೆ-ಆಗಂಬೆ ಹೆದ್ದಾರಿ 169 ಎ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಡಿಪಿಆರ್ ಹಂತದ ಪ್ರಕ್ರಿಯೆಗಳು ನಡೆದಿವೆ. ಕಾಮಗಾರಿ ಅನುಷ್ಠಾನದ ನಿರೀಕ್ಷೆ ಇನ್ನೂ ಹಾಗೆಯೇ ಇದೆ.
ಮಣಿಪಾಲ ಬಸ್‌ಸ್ಟಾಂಡ್
ಕಳೆದ ಮಳೆಗಾಲವಿಡೀ ಚಾಲಕರನ್ನು ಕಾಡಿದ್ದ ರಾ.ಹೆ . 169ರ ಮಣಿಪಾಲ ಮತ್ತು ಪರ್ಕಳ ಭಾಗದಲ್ಲಿ ಈ ಬಾರಿಯೂ ಹೊಂಡಗಳು ಉದ್ಭವವಾಗಿವೆ. ಉಡುಪಿ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ಸ್ಥಳಕ್ಕೆ ಹೋಗುವವರು ಅಪಾಯಕಾರಿ ಚರಂಡಿ ದಾಟಿಕೊಂಡು ಹೋಗಬೇಕಾಗಿದೆ. ಇದಕ್ಕೆ ಹಾಕಲಾದ ಸ್ಲಾéಬ್‌ಗಳು ಬೀಳುವಂತಿವೆ. ಇಲ್ಲಿ ಬಸ್‌ಗಳನ್ನು ಅತ್ಯಂತ ಗಡಿಬಿಡಿಯಾಗಿ ಹತ್ತುವವರೇ ಹೆಚ್ಚು. ಹಾಗಾಗಿ ಇಲ್ಲಿ ಮಳೆಗಾಲದಲ್ಲಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕಾದ ಆವಶ್ಯಕತೆ ಇದೆ.