Advertisement

ಕೃತಕ ನೆರೆಗೆ ನಲುಗುತ್ತಿದೆ ರಾಷ್ಟ್ರೀಯ ಹೆದ್ದಾರಿ

01:18 PM Oct 02, 2017 | |

ಬಂಟ್ವಾಳ: ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ, ಹೊಂಡ ಉಂಟಾಗಿ ಭೀತಿ ಮೂಡಿಸಿದೆ.

Advertisement

ಹೆದ್ದಾರಿಯ ಕೆಲವು ಕಡೆಗಳಲ್ಲಿ ಭಾರೀ ಮಳೆ ನೀರು ತುಂಬಿಕೊಂಡು ಲಘು ವಾಹನಗಳ ಚಕ್ರಗಳು ಸಂಪೂರ್ಣ ನೀರಿನೊಳಗೆ ಮುಳುಗುತ್ತಿವೆ. ಸೆ. 28 ಮತ್ತು ಸೆ. 30 ರಂದು ಇಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಬಂಟ್ವಾಳ ತಾಲೂಕು ವ್ಯಾಪ್ತಿಯ ಫರಂಗಿಪೇಟೆಯ ಬಳಿಕ ಮಾಣಿ ತನಕ ಇಂತಹ ಹತ್ತಕ್ಕೂ ಅಧಿಕ ಕೃತಕ ನೆರೆ ಸೃಷ್ಟಿಯಾಗುವ ಅಪಾಯಕಾರಿ ಸ್ಥಳಗಳಿವೆ.

ಎಲ್ಲೆಲ್ಲಿ ಅಪಾಯ?
ತುಂಬೆ ಬಿ.ಎ. ಕಾಲೇಜು, ಶಾಂತಿ ಅಂಗಡಿ, ಬಿ.ಸಿ.ರೋಡ್‌ ಬೆಸ್ಟ್‌ ಸ್ಕೂಲ್‌ ಮುಂಭಾಗ, ಪದ್ಮಾ ಪೆಟ್ರೋಲ್‌ ಪಂಪ್‌ ಎದುರು, ಬಿ.ಸಿ. ರೋಡ್‌ ಗಣೇಶ್‌ ಮೆಡಿಕಲ್‌ ಎದುರು, ಬಿ.ಸಿ.ರೋಡ್‌ ಬಿಎಸ್‌ಎನ್‌ಎಲ್‌ ಕಚೇರಿ ಮುಂಭಾಗ, ಪಾಣೆಮಂಗಳೂರು ಸತ್ಯಶ್ರೀ ಕಲ್ಲುರ್ಟಿ ದೈವಸ್ಥಾನದ ಎದುರು, ಮೆಲ್ಕಾರ್‌ ಸಂಚಾರ ಠಾಣೆಯ ಎದುರು, ಬೋಳಂಗಡಿ ಚಡವು, ನರಹರಿ ನಗರ, ದಾಸಕೋಡಿ, ಬಾಳ್ತಿಲ ತಿರುವುಗಳಲ್ಲಿ ಕೃತಕ ನೆರೆ ನೀರು ಸಂಗ್ರಹಗೊಳ್ಳುತ್ತದೆ. ಮಳೆ ಬಂದಾಗ ಸಂಚಾರ ಅಡಚಣೆ ಯಾಗಿ ಮೈಲುದ್ದ ಸರತಿ ಸಾಲು
ಅನಿವಾರ್ಯವಾಗುತ್ತದೆ. ಮಳೆಗಾಲದಲ್ಲಿ ನಿತ್ಯ ಟ್ರಾಫಿಕ್‌ ಜಾಮ್‌ ಎನ್ನುವಂತಾಗಿದೆ.

ಅವೈಜ್ಞಾನಿಕ ನಿರ್ಮಾಣ
ಅವೈಜ್ಞಾನಿಕ ರೀತಿಯ ಹೆದ್ದಾರಿ ಕಾಮಗಾರಿಯಿಂದಾಗಿ ಇಂತಹ ಕೃತಕ ನೆರೆ ಉಂಟಾಗುತ್ತಿದೆ. ತುಂಬೆಯಲ್ಲಿ ತಿರುವಿನಲ್ಲಿ ಒಂದು ಬದಿ ತಗ್ಗಾಗಿದ್ದು ಮಳೆ ನೀರು ರಸ್ತೆ ಯಲ್ಲಿಯೇ ಸಂಗ್ರಹವಾಗುತ್ತದೆ. ಇಲ್ಲಿ ಚರಂಡಿ ನಿರ್ಮಾಣವೂ ಆಗಿಲ್ಲ. ಬಿ.ಸಿ. ರೋಡ್‌ ಪದ್ಮಾ ಪೆಟ್ರೋಲ್‌ ಪಂಪ್‌ ಎದುರುಗಡೆ ಹೆದ್ದಾರಿಯ ಬಲಬದಿ ತಗ್ಗಾಗಿದ್ದು ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತದೆ. ಬಿ.ಸಿ.ರೋಡ್‌ನ‌ ಬಿಎಸ್‌ಎನ್‌ಎಲ್‌ ಕಚೇರಿ ಮುಂಭಾಗದಲ್ಲೂ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡದಿರುವುದರಿಂದ ಸಮಸ್ಯೆ ಉಂಟಾಗಿದೆ.

ಪಾಣೆ ಮಂಗಳೂರು, ಮೆಲ್ಕಾರ್‌, ಬೋಳಂಗಡಿ, ನರಹರಿ ನಗರ, ದಾಸಕೋಡಿ, ಬಾಳ್ತಿಲದಲ್ಲಿ ಎತ್ತರದಿಂದ ಮಳೆ ನೀರು ರಸ್ತೆಗೆ ಹರಿದು ಬರುತ್ತದೆ. ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣ ಮಾಡಿರುವುದು ಇಂತಹ ಅನಾಹುತಕ್ಕೆ ಕಾರಣ ಎಂಬುದು ಸಾರ್ವಜನಿಕರ ಅಭಿಪ್ರಾಯ.

Advertisement

ಅಂಗಡಿಗೂ ನುಗ್ಗಿದ ನೀರು
ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ಅಂಗಡಿ ಕೋಣೆಗಳಿಗೂ ನುಗ್ಗಿದೆ. ಕಸಕಡ್ಡಿಗಳು ಅಲ್ಲಲ್ಲಿ ಸಂಗ್ರಹವಾಗಿದೆ. ಅನೇಕರು ಹೆದ್ದಾರಿಯನ್ನು ಬಿಟ್ಟು ಸುತ್ತುಬಳಸು ರಸ್ತೆಯಲ್ಲಿ ಸಂಚರಿಸಿದ ಘಟನೆಯು ನಡೆದಿದೆ.

ಕಲ್ಲಡ್ಕದಿಂದ ಬಿ.ಸಿ.ರೋಡ್‌ಗೆ ಕೇವಲ ಆರು ಕಿ.ಮೀ. ದೂರಕ್ಕೆ ಸಂಚರಿಸಲು ಕನಿಷ್ಠ ಒಂದೂವರೆ ಗಂಟೆಗಳಷ್ಟು ಕಾಲದ ಅವಧಿಯನ್ನು ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.

ಸಂಚಾರಕ್ಕೆ ಕಿರಿಕಿರಿ
ಬಿ.ಸಿ.ರೋಡ್‌ – ಮಾಣಿ ಹೆದ್ದಾರಿ ಚತುಷ್ಪಥ ಕಾಮಗಾರಿ ಉದ್ದೇಶಕ್ಕೆ ಮೆಲ್ಕಾರ್‌ನಿಂದ ಮಾಣಿವರೆಗೆ ಅಲ್ಲಲ್ಲಿ ಮರಗಳನ್ನು ಕಡಿದು ಅದನ್ನು ಅಲ್ಲಿಂದ ಸಾಗಿಸದೆ ಇರುವುದು ಸಂಚಾರಕ್ಕೆ ಇನ್ನೊಂದು ತೊಂದರೆಯಾಗಿದೆ.

ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ
ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಮಳೆಯ ಪ್ರಮಾಣ ಕಡಿಮೆಯಾದ ಕೂಡಲೆ ಕಾಮಗಾರಿಗೆ ಚಾಲನೆ ಸಿಗಲಿದೆ. ಸುಲಲಿತ ಮತ್ತು ಸುರಕ್ಷಿತ ಸಂಚಾರಕ್ಕೆ ಪ್ರಾಧಿಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಲಾಗುವುದು.
ನಳಿನ್‌ ಕುಮಾರ್‌ ಕಟೀಲು,
ದ.ಕ. ಸಂಸದರು

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next