ಮೊಳಕಾಲ್ಮೂರು: ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಹಾಗೂ ಚತುಷ್ಪಥದ ಪರಿವೇ ಇಲ್ಲದ ಕಾಲಘಟ್ಟದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಗಳ ಇರುವಿಕೆ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ರಾಷ್ಟ್ರಾದ್ಯಂತ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿದರು.
ಅದೇ ರೀತಿ ಕೇಂದ್ರ ಸಚಿವ ನಿತಿನ್ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ನಿತಿನ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಹಲವಾರು ಪ್ರಗತಿ ಕಾರ್ಯಗಳನ್ನು ಕೈಗೊಂಡು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀರಂಗಪಟ್ಟಣದಿಂದ ಬೀದರ್‌ವರೆಗೆ ಹಾಗೂ ಚಿತ್ರದುರ್ಗದಿಂದ ವಿಜಯನಗರಕ್ಕೆ ಹೋಗುವ ರಾಷ್ಟ್ರೀಯಹೆದ್ದಾರಿಗಳು ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ ಎಂದು ಶ್ಲಾಘಿಸಿದರು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಡಬಲ್ ಇಂಜಿನ್ ರೀತಿಯಲ್ಲಿ ಕೆಲಸ ಮಾಡುತ್ತೇವೆ. 614 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಭದ್ರಾ ಮೇಲ್ದಂಡೆ ಯೋಜನೆಯಡಿ 78 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗಿದೆ. ಶೀಘ್ರದಲ್ಲಿಯೇ ತುಂಗಾ ಹಿನ್ನೀರು ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಮಂಡಲಾಧ್ಯಕರಾದ ಡಾ| ಪಿ.ಎಂ. ಮಂಜುನಾಥ, ಈ. ರಾಮ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಚಂದ್ರಶೇಖರ ಗೌಡ, ತಾಪಂ ಮಾಜಿ ಸದಸ್ಯ ಎಸ್.ತಿಪ್ಪೇಸ್ವಾಮಿ, ಸಚಿವರ ಆಪ್ತ ಸಹಾಯಕರಾದ ಪಾಪೇಶ್ ನಾಯಕ, ಹನುಮಂತರಾಯಪ್ಪ, ಪಪಂ ಅಧ್ಯಕ್ಷ ಪಿ. ಲಕ್ಷ ¾ಣ, ಉಪಾಧ್ಯಕ್ಷೆ ಶುಭಾ ಪೃಥ್ವಿರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆಸವಿತಾಅರ್ಜುನ,ತಹಶೀಲ್ದಾರ್‌ಟಿ.ಸುರೇಶ್ ಕುಮಾರ್, ತಾಪಂ ಇಒ ಕೆ.ಒ. ಜಾನಕಿರಾಮ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಿ.ದಯಾನಂದ ಮತ್ತಿತರರು ಇದ್ದರು.