ಕಾಸರಗೋಡು: ವಿಳಂಬವಾಗಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ವಿಸ್ತರಣೆಗಾಗಿ ಅಭಿವೃದ್ಧಿಗಾಗಿ ನಿರ್ಮಿಸುವ ಜಿಲ್ಲೆಯ ಪ್ರಥಮ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕರಂದಕ್ಕಾಡಿನಲ್ಲಿ ಈ ಕಾಮಗಾರಿಗೆ ಚಾಲನೆ ನೀಡಲಾಗಿದೆ.
30 ಕಂಬಗಳ ಸಹಿತ 1.12 ಕಿ.ಮೀ. ದೂರದ ವರೆಗೆ ಕರಂದಕ್ಕಾಡಿನಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮೀ ಕ್ಷೇತ್ರದ ತನಕ ಮೇಲ್ಸೇತುವೆಯನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದರಂತೆ 5 ಪಿಲ್ಲರ್‌ಗಳ ನಿರ್ಮಾಣ ಕಾರ್ಯವು ಆರಂಭಗೊಂಡಿದೆ.
ಕರಂದಕ್ಕಾಡು ಮತ್ತು ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದ ನುಳ್ಳಿಪ್ಪಾಡಿ ಕ್ಷೇತ್ರದ ಎರಡು ತುದಿಗಳಲ್ಲೂ ಟೆಸ್ಟ್ ಫೈಲಿಂಗ್ ಕಳೆದ ಬಳಿಕ ಫ್ಲೈಓವರ್‌ನ ಮೊದಲ ಪಿಲ್ಲರ್ ಕೆಲಸವನ್ನು ಆರಂಭಿಸಲಾಗಿದೆ.
ತಲಪ್ಪಾಡಿಯಿಂದ ಚೆಂಗಳದ ವರೆಗೆ ಮೊದಲ ರೀಚ್‌ನಂತೆ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಏಕ ಮೇಲ್ಸೇತುವೆ ಇದಾಗಿದೆ. ಎರಡೂವರೆ ವರ್ಷಗಳಲ್ಲಿ ತಲಪ್ಪಾಡಿ – ಚೆಂಗಳ ರೀಚ್ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾರ್ಯಪೂರ್ಣಗೊಳ್ಳಲಿದೆ. ಮೇಲ್ಸೇತುವೆಯ ಕಾಮಗಾರಿ ಒಂದೂವರೆ ವರ್ಷದಲ್ಲಿ ಪೂರ್ತಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಲ್ಸೇತುವೆಯಲ್ಲಿ 6 ವಾಹನಗಳಿಗೆ ಸಾಗುವ ದಾರಿ ಹಾಗೂ ಅಡಿಭಾಗದಲ್ಲಿ 4 ವಾಹನಗಳಿಗೆ ಸಾಗುವ ರೀತಿಯಲ್ಲಿ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ಇದರಿಂದ ಟ್ರಾಫಿಕ್ ಸಮಸ್ಯೆಯಿಲ್ಲದೆ ವಾಹನಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಾಗಲಿದೆ. ಪ್ರಸ್ತುತ ತಾತ್ಕಾಲಿಕವಾಗಿ ವಾಹನಗಳಿಗೆ ಸಂಚರಿಸಲು ರಸ್ತೆ ನಿರ್ಮಿಸಲಾಗುತ್ತಿದೆ.