Advertisement

ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್‌, ಪ್ರತಿಭಟನೆ

11:48 AM Dec 14, 2018 | Team Udayavani |

ಮೈಸೂರು: ರಾಜ್ಯ ಸರ್ಕಾರ ರೈತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡುವ ಮೂಲಕ ಪ್ರತಿಭಟಿಸಿದರು. 

Advertisement

ನಗರದ ಬಂಡೀಪಾಳ್ಯ ಸಮೀಪದ ಮೈಸೂರು-ನಂಜನಗೂಡು ಮುಖ್ಯರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸಿದ ಹೋರಾಟವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ನಿರ್ಲಕ್ಷ್ಯವಹಿಸಿದೆ. ಆ ಮೂಲಕ ರೈತರ ಪರವಾಗಿದೆ ಎಂದು ಹೇಳುವ ಮೈತ್ರಿ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬೆಂಬಲ ಬೆಲೆ: ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಭತ್ತಕ್ಕೆ 1750 ರೂ. ಬೆಂಬಲ ಬೆಲೆ ಪ್ರೋತ್ಸಾಹ ಧನದೊಂದಿಗೆ ಪ್ರತಿ ಕ್ವಿಂಟಲ್‌ಗೆ 250 ರೂ. ಸೇರಿಸಿ 2 ಸಾವಿರ ರೂ. ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಈ ಹೋರಾಟಕ್ಕೆ ಸರ್ಕಾರ ಯಾವುದೇ ಸ್ಪಂದನೆ ನೀಡದೆ, ನಿರ್ಲಕ್ಷ್ಯವಹಿಸುತ್ತಿದೆ.

ಬೆಳಗಾವಿಯಲ್ಲಿ ಆರು ದಿನಗಳಿಂದ ರೈತರು ಪ್ರತಿಭಟನೆ ಮಾಡಿದರೂ ನೀವು ಸುಮ್ಮನೆ ಇದ್ದೀರಾ? ಏಕೆ ರೈತರ ಕೂಗು ನಿಮಗೆ ಕೇಳಿಸುತ್ತಿಲ್ಲವೇ? ರೈತರು ಅಂದರೆ ನಿಮಗೆ ಅಷ್ಟು ಕೇವಲವೇ? ರೈತರಿಗೆ ಇಲ್ಲದ ಭರವಸೆ ನೀಡಿ, ಮೋಸ ಮಾಡುತ್ತಿದ್ದೀರಾ? ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಕಿಡಿಕಾರಿದರು. 

ಇಳುವರಿ ಹೆಚ್ಚಿಸಿ: ಸರ್ಕಾರ ಈಗಲೇ ಎಚ್ಚೆತ್ತು ರೈತರ ಪ್ರಮುಖ ಬೇಡಿಕೆಗಳಾದ ಕಬ್ಬಿನ ನ್ಯಾಯಾ ಸಮ್ಮತ ಮೌಲ್ಯಧಾರಿತ ಬೆಲೆ (ಎಫ್ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ (ಎಕ್ಸ್‌ಪಿಕ್ಸ್‌) ಎಂದು ನಿಗದಿ ಮಾಡಬೇಕು. ಕೇಂದ್ರ ಸರ್ಕಾರದ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ಮಾಡಿರುವ ಪರಿಣಾಮ ರೈತರಿಗೆ ನಷ್ಟವಾಗುತ್ತಿದೆ.

Advertisement

ಇಳುವರಿಯನ್ನು 9.5-10 ಗೆ ನಿಗದಿ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಭತ್ತಕ್ಕೆ 1750 ರೂ. ಬೆಂಬಲ ಬೆಲೆ ಪ್ರೋತ್ಸಾಹ ಧನದೊಂದಿಗೆ ಕ್ವಿಂಟಲ್‌ಗೆ 250 ರೂ. ಸೇರಿಸಿ 2 ಸಾವಿರ ರೂ ನಿಗದಿ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. 

ಸಂಚಾರ ಅಡಚಣೆ: ತಮ್ಮ ಬೇಡಿಕೆ ಈಡೇರಿಕೆಗಾಗಿ ಅಂದಾಜು ಒಂದೂವರೆ ಗಂಟೆಗೂ ಹೆಚ್ಚು ಕಾಲ ರೈತರು ರಸ್ತೆತಡೆದು ಪ್ರತಿಭಟಿಸಿದರು. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಭಾರೀ ಅಡಚಣೆಯಾಯಿತು. ಅರ್ಧ ಕಿಲೋ ಮೀಟರ್‌ಗೂ ಹೆಚ್ಚು ದೂರದವರೆಗೆ ವಾಹನಗಳ ದಟ್ಟಣೆ ಉಂಟಾಯಿತು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು, ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾಧಕ್ಷ ಸೋಮಶೇಖರ್‌, ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್‌, ಬಿ.ಪಿ.ಪರವಶಿವಮೂರ್ತಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next