ಉಡುಪಿ: ಕಳೆದ ಕೆಲ ದಿನಗಳಿಂದ ಮಳೆ ಸ್ವಲ್ಪ ಬಿಡುವು ನೀಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಿದ್ದಿರುವ ಹೊಂಡಗಳಿಗೆ ತೇಪೆ ಕಾರ್ಯವನ್ನು ನವಯುಗ ಕಂಪೆನಿ ಚಾಲನೆ ನೀಡಿದೆ.
ಬ್ರಹ್ಮಾವರ, ಕರಾವಳಿ ಬೈಪಾಸ್, ಅಂಬಲ ಪಾಡಿ, ಕಟಪಾಡಿ, ಪಡುಬಿದ್ರಿ, ತೊಕ್ಕೊಟ್ಟು ಮೊದಲಾದೆಡೆ ಬಿದ್ದಿರುವ ಹೊಂಡಗಳಿಗೆ ತೇಪೆ ಕಾರ್ಯ ನಡೆಸಲಾಗಿದೆ .
ಉದಯವಾಣಿ ಜತೆ ಮಾತನಾಡಿದ ನವಯುಗ ಟೋಲ್ ಮ್ಯಾನೇಜರ್ ರವಿಬಾಬು, ನಾವು ರಸ್ತೆಯ ಹೊಂಡಗಳನ್ನು ಮುಚ್ಚುವ ಕುರಿತು ಕ್ರಮ ಕೈಗೊಂಡಿದ್ದೇವೆ. ಹೊಂಡ ಮುಚ್ಚುವುದಕ್ಕಾಗಿಯೇ ಒಂದು ತಂಡವನ್ನು ರಚಿಸಿದ್ದು, ತೀವ್ರ ಮಳೆ ಹಿನ್ನೆಲೆ ಮುಚ್ಚಲು ಸಾಧ್ಯವಾಗಿರಲಿಲ್ಲ. ಕಳೆದ ಎರಡು ಮೂರು ದಿನಗಳಿಂದ ಮಳೆಯ ತೀವ್ರತೆ ಕಡಿಮೆಯಾದ ಹಿನ್ನೆಲೆ ಹೊಂಡ ಮುಚ್ಚುವ ಕಾಮಗಾರಿ ನಡೆಸುತ್ತಿದ್ದೇವೆ. ಕಾಪು ಭಾಗದಲ್ಲಿ ಕಾಮಗಾರಿ ನಡೆಸುವ ವೇಳೆ ಮಳೆ ಬಂದ ಕಾರಣ ಅಲ್ಲಿ ಮಾತ್ರ ಸ್ಥಗಿತಗೊಳಿಸಿದ್ದೇವೆ. ಮತ್ತುಳಿದಂತೆ ಎಲ್ಲ ಕಡೆ ತೇಪೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಕುಂದಾಪುರದಿಂದ ತಲಪಾಡಿಯವರೆಗೆ ಕೆಲವೆಡೆ ಬೃಹತ್ ಹೊಂಡಗಳು ಮಳೆಯಿಂದ ಸೃಷ್ಟಿಯಾಗಿತ್ತು. ಕುಂದಾಪುರದಲ್ಲಿ ಕಳೆದ 8 ವರ್ಷಗಳಿಂದ ಫೈಓವರ್‌ನ ನಿಧಾನಗತಿ ಕಾಮಗಾರಿಯಿಂದ ಬಸ್ರೂರು ಮೂರ್‌ಕೈನಿಂದ ಸಂಗಮ್‌ವರೆಗೆ ರಸ್ತೆ ಅಗಲೀಕರಣ ನಡೆಸದೆ ರಸ್ತೆ ದುಸ್ಥಿತಿಯಲ್ಲಿತ್ತು. ಈ ಬಾರಿ ಮಳೆಯಿಂದ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿ ಹೊಂಡ ಮತ್ತು ರಸ್ತೆಯ ಅಂಚನ್ನು ಗುರುತಿಸಲಾಗದ ಸ್ಥಿತಿ ಉಂಟಾಗಿದೆ. ಸಹಾಯಕ ಕಮಿಷನರ್ ಟಿ. ಭೂಬಾಲನ್ ಅವರು ನಿಧಾನಗತಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆ ಕುರಿತು ಗುತ್ತಿಗೆದಾರರಿಗೆ ನೋಟಿಸ್ ಮಾಡಿದ್ದಲ್ಲದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಸೂಚನೆ ಕೊಟ್ಟಿದ್ದರು. ಸೋಮವಾರ ನಡೆದ ದಿಶಾ ತ್ತೈಮಾಸಿಕ ಸಭೆಯಲ್ಲೂ ಕೂಡ ಸಂಸದೆ ಶೋಭಾ ಕರಂದ್ಲಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.