Advertisement

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಂಡ-ಗುಂಡಿಗಳದ್ದೇ ಕಾರುಬಾರು

11:19 PM Oct 11, 2019 | Sriram |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿ, ಪಾಂಗಾಳ ಬಳಿಯಲ್ಲಿ ಗುಂಡಿಗಳದ್ದೇ ಕಾರುಬಾರು. ಹೆದ್ದಾರಿಯ ಸಮರ್ಪಕ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ದ್ವಿಚಕ್ರ ಸವಾರರ ಸವಾರಿಯು ಅಪಾಯಕಾರಿಯಾಗಿ ಸಂಭವಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅ.9ರ ಸಂಜೆಯ ವೇಳೆಯಲ್ಲಿ ಕಟಪಾಡಿಯ ಹಳೆ ಎಂಬಿಸಿ ರಸ್ತೆಯಿಂದ ಉಡುಪಿಯತ್ತ ತೆರಳುವಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಧಿಸುವ ಅನತಿ ದೂರದಲ್ಲಿ ಸೃಷ್ಟಿಯಾಗಿರುವ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುತ್ತಾರೆ. ಅದೃಷ್ಟವಶಾತ್‌ ಹಿಂಭಾಗದಲ್ಲಿ ಯಾವುದೇ ವಾಹನ ಬಾರದೇ ಇದ್ದು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರದೇಶವು ಕಟಪಾಡಿ ಪೇಟೆಯಿಂದ ಇಳಿಜಾರು ಹೆದ್ದಾರಿ ಪ್ರದೇಶವಾಗಿದ್ದು ವಾಹನಗಳು ಅತೀ ವೇಗದಿಂದ ಸಂಚರಿಸುತ್ತವೆ. ಸಣ್ಣ ವಾಹನಗಳೂ ಹೊಂಡ ಕಂಡು ಸಡನ್‌ ಬ್ರೇಕ್‌ ಹಾಕಿದಲ್ಲೂ ಅಪಾಯಕಾರಿಯಾಗಿ ಪರಿಣಮಿಸಬಲ್ಲದು ಎಂದು ಸ್ಥಳೀಯರು ತಮ್ಮ ದುಗುಡವನ್ನು ವ್ಯಕ್ತಪಡಿಸಿದ್ದಾರೆ.

ಮಾಸಿ ಹೋದ ವೈಟ್‌ ಟ್ಯಾಪಿಂಗ್‌
ವೈಟ್‌ ಟ್ಯಾಪಿಂಗ್‌ ಕೂಡಾ ಮಾಸಿ ಹೋಗಿದ್ದು, ಕತ್ತಲಾದಂತೆ ಈ ಹೊಂಡವು ಗಮನಕ್ಕೆ ಬಾರದೇ ಮತ್ತಷ್ಟು ಹೆಚ್ಚು ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತು ಈ ಸಮಸ್ಯೆಯನ್ನು ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ದಿನನಿತ್ಯ ಹೆದ್ದಾರಿ ಗುತ್ತಿಗೆ ಕಂಪೆನಿಯ ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿದ್ದರೂ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹೊಂಡಗಳ ಬಗ್ಗೆ ಯಾವುದೇ ಪರಿಣಾಮಕಾರಿಯಾದ ನಿರ್ವಹಣೆಯನ್ನು ನಡೆಸುತ್ತಿಲ್ಲ.

ಮಳೆಗಾಲ ಮುಗಿದ ಅನಂತರವೂ ರಾಷ್ಟ್ರೀಯ ಹೆದ್ದಾರಿಯು ಯಾವುದೇ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಈ ಬಗ್ಗೆ ನಿತ್ಯ ಸಂಚಾರಿಗಳು ಸಾಕಷ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಗಮ ಸಂಚಾರವನ್ನು ಕಲ್ಪಿಸಬೇಕಾದ ರಾಷ್ಟ್ರೀಯ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸುತ್ತಿರುವುದು ಬಹಳಷ್ಟು ಆತಂಕಕಾರಿಯಾಗಿದೆ. ಹೆಚ್ಚಿನ ಅವಘಡ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯು ಕೂಡಲೇ ಎಚ್ಚೆತ್ತು ನಿರ್ವಹಣೆಯ ಕಾರ್ಯವನ್ನು ನಡೆಸಬೇಕಿದೆ ಎಂದು ನಿತ್ಯ ಸಂಚಾರಿಗಳು, ಸಾರ್ವಜನಿಕರು, ಸ್ಥಳೀಯರ ಆಗ್ರಹ.

Advertisement

ಸಂಚಾರ ದುಸ್ತರ
ರಿಕ್ಷಾ ಸಂಚಾರಕ್ಕೂ ಸಮಸ್ಯೆ. ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಳ್ಳುವುದೇ ಹೆಚ್ಚು. ಅವಘಡವೂ ಹೆಚ್ಚು ಸಂಭವಿಸಿವೆ. ಪಾಂಗಾಳ, ಕಟಪಾಡಿ ಸಹಿತ ಇತರೆಡೆಗಳಲ್ಲೂ ಸಂಚಾರ ದುಸ್ತರವಾಗಿದೆ. ಇತರೇ ವಾಹನ ಸಂಚಾರಕ್ಕೂ ಕಷ್ಟವಾಗುತ್ತಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ವಹಣೆ ಮಾಡಬೇಕು.
– ಭಾಸ್ಕರ ಪೂಜಾರಿ, ರಿಕ್ಷಾ ಚಾಲಕ,
ಕಟಪಾಡಿ ಗ್ರಾ.ಪಂ.ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next