Advertisement

ಹೇರೂರು ಸೇತುವೆಯಲ್ಲಿ ಕತ್ತಲ ಭಾಗ್ಯ! 

12:30 AM Feb 02, 2019 | Team Udayavani |

ವಿಶೇಷ ವರದಿ- ಉಡುಪಿ: ಮುಂಬಯಿ, ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವವರು ನಿತ್ಯ ಇದೇ ಎರಡು ಸೇತುವೆಗಳನ್ನು ಹಾದು ಹೋಗಬೇಕು. ಆದರೆ ಈ ಸೇತುವೆಗಳು ಸಂಜೆಯಾದರೆ ಸಾಕು ಕತ್ತಲ ಕೂಪಕ್ಕೆ ಜಾರುತ್ತಿವೆ. ಇದು ಕಳೆದ ಒಂದೂವರೆ ತಿಂಗಳಿನಿಂದ ಹೆರೂರು ಸೇತುವೆ ಕಥೆ-ವ್ಯಥೆ. 

Advertisement

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಹೇರೂರು ಸೇತುವೆ ಕಾಮಗಾರಿ ಸಂದರ್ಭ ಹೊಸದಾಗಿ ಆಳವಡಿಸಿರುವ ಬೀದಿ ದೀಪಗಳು ನಿರ್ವಹಣೆಯಿಲ್ಲದೆ ಉರಿಯುತ್ತಿಲ್ಲ. ಅಪಘಾತ ವಲಯವೆಂಬ ಅಪಕೀರ್ತಿಗೆ ಒಳಗಾಗಿರುವ ಈ ಪ್ರದೇಶದಲ್ಲಿ ಕತ್ತಲು ಕವಿದ ಮೇಲೆ ಪಾದಚಾರಿಗಳೂ ಹೋಗಲು ಭಯಪಡುತ್ತಾರೆ. ಇಷ್ಟಾದರೂ ಗುತ್ತಿಗೆದಾರ ನವಯುಗ ಸಂಸ್ಥೆ ಮೌನಕ್ಕೆ ಶರಣಾಗಿದೆ.

2 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ವೇಳೆ ಆರು ವಿದ್ಯುತ್‌ ಕಂಬಗಳನ್ನು, ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಈಗ ಎಲ್ಲ ದೀಪಗಳೂ ಕೆಟ್ಟು ಹೋಗಿವೆ. 

4,000 ವಾಹನಗಳ ಸಂಚಾರ
ಸೇತುವೆಯಲ್ಲಿ ನಿತ್ಯ 4 ಸಾವಿರಕ್ಕೂ  ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ರಾತ್ರಿ ವೇಳೆ ಸರಕು ಹಾಗೂ ಮೀನು ಸಾಗಾಟ ಲಾರಿಗಳ ಓಡಾಟ ಹೆಚ್ಚು. ಈ ವೇಳೆ ಚಾಲಕರು ನಿರ್ಲಕ್ಷ್ಯವಹಿಸಿದರೆ, ಅಪಾಯ ಕಟ್ಟಿಟ್ಟದ್ದು.  ರಾತ್ರಿ ವಾಹನಗಳ ಹೈಬೀಮ್‌ನಿಂದಾಗಿ ತಿರುವು ಮತ್ತು ಸೇತುವೆ ಬದಿ ಕಾಣಿಸುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತದೆ. ಇದು ಕೇವಲ ಹೇರೂರು ಸೇತುವೆಯ ಸಮಸ್ಯೆ ಮಾತ್ರವಲ್ಲ, ಉಡುಪಿ- ಕುಂದಾಪುರ ಹೆದ್ದಾರಿಯಲ್ಲಿ ಶೇ. 40ರಷ್ಟು  ಬೀದಿ ದೀಪಗಳು ಹಾಳಾಗಿವೆ. ಕಾಮಗಾರಿ ಜವಾಬ್ದಾರಿ ವಹಿಸಿಕೊಂಡಿರುವ ನವಯುಗ ಸಂಸ್ಥೆ ಈ ಬಗ್ಗೆ ಗಮನ ಗಮನ ಹರಿಸಿಲ್ಲ. ಆದ್ದರಿಂದ ಸುರಕ್ಷತೆ ಹಿನ್ನೆಲೆಯಲ್ಲಿ ಕೂಡಲೇ ಗುತ್ತಿಗೆದಾರ ಕಂಪೆನಿ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತ ಗಮನಹರಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.  

ವರ್ಷದಲ್ಲಿ  6 ಅವಘಡ
ಈ ಸ್ಥಳ ಅಪಘಾತಕ್ಕೂ ಪ್ರಸಿದ್ಧ. 2017-18ನೇ ಸಾಲಿನಲ್ಲಿ ಒಟ್ಟು ಆರು ಆಪಘಾತಗಳು ಸಂಭವಿಸಿದ್ದು, 10ಕ್ಕಿಂತ ಅಧಿಕ ಜನರು ಗಾಯಾಳುಗಳಾಗಿದ್ದಾರೆ ಎಂದು ಪೊಲೀಸ್‌ ಇಲಾಖೆಯ ಮಾಹಿತಿ ನೀಡಿದೆ.

Advertisement

ಜವಾಬ್ದಾರಿ ಕಂಪೆನಿಯದ್ದು 
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆಯನ್ನು ನವಯುಗ ಸಂಸ್ಥೆ ನೀಡಲಾಗಿದೆ. ಹಾಗೂ ಅವರೇ ಅಳವಡಿಸಿದ ಬೀದಿ ದೀಪಗಳ ನಿರ್ವಹಣೆ ಜವಾಬ್ದಾರಿಯೂ ಅವರ ಮೇಲಿದೆ.  
– ವಿಜಯ ಕುಮಾರ್‌
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ 

ದುರಸ್ತಿಗೆ ಮುಂದಾಗಿಲ್ಲ 
ಪಂಚಾಯಿತಿ ಸುಪರ್ದಿಯಲ್ಲಿರುವ, ಹೆದ್ದಾರಿ ಸಮೀಪ ಅಳವಡಿಸಲಾದ ಸೋಲಾರ್‌ ಬೀದಿದೀಪಗಳು ಕೆಟ್ಟರೆ ಒಂದೆರಡು ದಿನಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆ ತಿಂಗಳು ಕಳೆದರೂ ಇಲ್ಲಿ ಗುತ್ತಿಗೆದಾರ ನವಯುಗ ಕಂಪೆನಿ ದುರಸ್ತಿಗೆ ಮುಂದಾಗಿಲ್ಲ. ಇಲ್ಲಿ ಪಾದಚಾರಿಗಳು ಸಂಚರಿಸಲೂ ಭಯ ಪಡುತ್ತಿದ್ದಾರೆ.
– ಸೂರಪ್ಪ ,
ಹೇರೂರು ರಿಕ್ಷಾ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next