ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನವಾದ ಬುಧವಾರವೂ (ಜುಲೈ 27) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪ್ರತಿಭಟನೆ ಮುಂದುವರಿದಿದೆ.
ಇದನ್ನೂ ಓದಿ:ಮಂಗಳೂರು: ರೈಲ್ವೇ ಅಂಡರ್ ಪಾಸ್ ನಲ್ಲಿ ನಿಲ್ಲಿಸಿದ್ದ ಕಾರು,ಜೀಪ್ ಬೆಂಕಿಗೆ ಆಹುತಿ
ಮಂಗಳವಾರ ಸುದೀರ್ಘ 6ಗಂಟೆಗಳ ಕಾಲ ಸೋನಿಯಾ ಗಾಂಧಿಯನ್ನು ವಿಚಾರಣೆಗೆ ಗುರಿಪಡಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಸೋನಿಯಾ ಇಂದು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗೂಡಿ ಇ.ಡಿ ಕಚೇರಿಗೆ ಆಗಮಿಸಿದ್ದರು. ಈಗಾಗಲೇ ಎಂಟು ಗಂಟೆಗಿಂತಲೂ ಅಧಿಕ ತಾಸು ಸೋನಿಯಾ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಸೋನಿಯಾಗೆ 65ರಿಂದ 70 ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ವರದಿ ತಿಳಿಸಿದೆ.
ಮುಂಬೈ ಸೇರಿದಂತೆ ಹಲವೆಡೆ ಪ್ರತಿಭಟನೆ:
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಗುರಿಪಡಿಸಿರುವುದನ್ನು ವಿರೋಧಿಸಿ ಮುಂಬೈಯ ಬೋರಿವಿಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೈಲನ್ನು ತಡೆಯಲು ಯತ್ನಿಸಿರುವ ಘಟನೆ ನಡೆದಿದೆ. ದೆಹಲಿಯಲ್ಲಿಯೂ ಎಐಸಿಸಿ ಪ್ರಧಾನ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿ ವಿವರಿಸಿದೆ.