Advertisement
ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿ ಸಿಂಧೂ ಹುಟ್ಟಿದಾಗ ಮನೆಯವರೆಲ್ಲ ರಿಗೂ ಸಿಟ್ಟು ಬಂದಿತ್ತು. ಬೇಡದ ಆ ಹೆಣ್ಣುಮಗುವನ್ನು ಮನೆಯವರು “ಚಿಂದಿ’ ಎಂದೇ ಕರೆಯುತ್ತಿದ್ದರು. ಅಮ್ಮನಿಗಂತೂ ಮಗಳನ್ನು ಕಂಡರೆ ಕೆಂಡಾಮಂಡಲ ಸಿಟ್ಟು ಬರುತ್ತಿತ್ತು. ಹೆಣ್ಣು ಹುಟ್ಟಿದ್ದಕ್ಕೆ ಅಪ್ಪನಿಗೆ ಬೇಸರವಿದ್ದರೂ, ಕರುಳು ಕೇಳಬೇಕಲ್ಲವೆ? ಆಗೀಗ ಆ ಮಗುವಿನೊಡನೆ ನಾಲ್ಕು ಚೆಂದದ ಮಾತನಾಡುತ್ತಿದ್ದ. ಹೆಂಡತಿಯ ಬೈಗುಳ ಲೆಕ್ಕಿಸದೆ ಆಕೆಯನ್ನು ಶಾಲೆಗೂ ಕಳುಹಿಸಿದ.
Related Articles
ಹೆಣ್ಣುಮಗು ಬೇಡ ಎನ್ನುವ ಮನಸ್ಥಿತಿಯನ್ನು ಹೋಗಲಾಡಿಸುವ ಸಲುವಾಗಿಯೇ ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2008ರಲ್ಲಿ ಜನವರಿ 24ನೆಯ ತಾರೀಕನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಎಂದು ಘೋಷಿಸಿದೆ.
Advertisement
ಹೆಣ್ಣು ಮಗುವನ್ನು ಉಳಿಸುವ, ಹೆಣ್ಣು ಮಕ್ಕಳ ಅಧಿಕಾರ, ಆರೋಗ್ಯ, ವಿದ್ಯಾಭ್ಯಾಸ, ಪೋಷಣೆ ಮತ್ತು ಪೋಷಕಾಂಶದ ಬಗ್ಗೆ ಅರಿವು ಮೂಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಇದೇ ಉದ್ದೇಶದಿಂದ ದೇಶದುದ್ದಕ್ಕೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಆರೋಗ್ಯ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಇದರ ಅಭಿಯಾನದ ಧ್ಯೇಯ. ಈ ಯೋಜನೆಯು ಹೆಣ್ಣುಮಕ್ಕಳು ಎದುರಿಸುತ್ತಿರುವ ತಾರತಮ್ಯ, ಅಸಮಾನತೆ, ಶೋಷಣೆ ಮತ್ತು ಗಂಡು-ಹೆಣ್ಣಿನ ಅನುಪಾತದ ಬಗ್ಗೆ ಜನರಿಗೆ ತಿಳಿಹೇಳುವ ಪ್ರಯತ್ನವನ್ನೂ ಮಾಡುತ್ತಿದೆ.
ಬಾಲಕಿಯರ ಮೇಲಿನ ದೌರ್ಜನ್ಯ ಭ್ರೂಣಾವಸ್ಥೆಯಲ್ಲೇ ಶುರುವಾಗುತ್ತದೆ, ಭ್ರೂಣ ಪರೀಕ್ಷೆ ಮಾಡಿ ಹೆಣ್ಣಾಗಿದ್ದರೆ ಹೊಸಕಿ ಹಾಕುವ ಕಾರ್ಯ ಮೌನವಾಗಿ ನಡೆಯುತ್ತಿದೆ. ಹೀಗೆ ಕ್ರೂರವಾಗಿದ್ದ ಕಾರಣಕ್ಕೆ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ತೀವ್ರವಾಗಿ ಕುಸಿದಿದೆ.
ತ್ಯಾಗವಲ್ಲ, ಬದುಕು ಬೇಕುಬಾಲಕಿಯರ ಮೇಲಿನ ದೌರ್ಜನ್ಯ ಅವಿದ್ಯಾವಂತರ ವರ್ಗದಲ್ಲಿ ಮಾತ್ರ ಜಾಸ್ತಿ ಎನ್ನುವಂತಿಲ್ಲ. ವಿದ್ಯಾವಂತರಲ್ಲೂ ಈ ಮನಸ್ಥಿತಿ ಇದೆ. ಇನ್ನು ಗಂಡುಮಕ್ಕಳ ಏಳಿಗೆಗಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಸ್ವಾತಂತ್ರ್ಯ, ಹಣಕಾಸು ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬಂದ ಸಂದರ್ಭಗಳೂ ಅನೇಕ. ನಮ್ಮ ದೇಶದ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಪುರಾತನವಾದ ಸಂಸ್ಕೃತಿಗಳಲ್ಲೊಂದು, ಹೆಣ್ಣನ್ನು ದೇವತೆಯಾಗಿಯೂ ಪೂಜಿಸುವ ದೇಶ. ಹಾಗಂತ ಇಂದಿನ ವಾಸ್ತವ ಅಷ್ಟೊಂದು ಚೆನ್ನಾಗಿಯೇನೂ ಇಲ್ಲ. ಅನಾಚಾರ-ಅತ್ಯಾಚಾರದ ಸುದ್ದಿಗಳು ಮಾಧ್ಯಮಗಳ ದಿನನಿತ್ಯದ ಸುದ್ದಿಯಾಗಿ ಬಿಟ್ಟಿವೆ. ಹೆಣ್ಣುಮಕ್ಕಳ ಕುರಿತು ತಾರತಮ್ಯ ಮಾಡುವ ಇಂಥ ಕಪ್ಪುಚುಕ್ಕೆಗಳನ್ನು ಅಳಿಸುವಲ್ಲಿ ಮಹಿಳೆಯರ ಜವಾಬ್ದಾರಿ ಇಲ್ಲದಿಲ್ಲ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಕುಟಂಬದವರು ಮಹಿಳೆಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು. ಅದರಲ್ಲಿಯೂ ಹೆಣ್ಣುಮಕ್ಕಳೊಡನೆ ಹೇಗೆ ವರ್ತಿಸಬೇಕು ಎಂಬುದನ್ನು ಮನೆಯ ಗಂಡುಮಕ್ಕಳಿಗೆ ಹೇಳಿಕೊಡಲು ಅಮ್ಮಂದಿರು ಹಿಂಜರಿಯಬಾರದು. ಯಾವ ಕಾರಣಕ್ಕೂ ಹೆಣ್ಣುಮಕ್ಕಳಿಗೆ ಸಿಗಬೇಕಾದ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು. ಬಾಲಕಿಯರು ಎದುರಿಸುತ್ತಿರುವ ತೊಂದರೆಗಳನ್ನು ದೂರಮಾಡಲು ಬದಲಾಗಬೇಕಾಗಿರುವುದು ಸಮಾಜದ ಜನರ ಮನಸ್ಸು ಮತ್ತು ವ್ಯವಸ್ಥೆ. ಗೀತಾ ಕುಂದಾಪುರ