Advertisement

Today National Girl Child Day; ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷೆಗಿರಲಿ ಆದ್ಯತೆ

12:29 AM Jan 24, 2024 | Team Udayavani |

ದೇಶದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳಿಗೆ ಸೂಕ್ತ ಪರಿಹಾರೋಪಾಯ ಗಳನ್ನು ಕಂಡುಕೊಳ್ಳುವ ದಿಸೆಯಲ್ಲಿ ಚಿಂತನೆ ನಡೆಸುವ ಜತೆಯಲ್ಲಿ ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣದ ಕುರಿತಂತೆ ಅರಿವು ಮೂಡಿಸುವ ಮಹತ್ತರ ಉದ್ದೇಶದೊಂದಿಗೆ ಪ್ರತೀ ವರ್ಷ ಜನವರಿ 24ರಂದು “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ’ವನ್ನು ಆಚರಿಸಲಾಗುತ್ತದೆ.

Advertisement

ಆಚರಣೆ ಪ್ರಾರಂಭ ಮತ್ತು ಉದ್ದೇಶ
ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2008ರಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಆಚರಣೆಗೆ ಪ್ರಪ್ರಥಮವಾಗಿ ಚಾಲನೆ ನೀಡಿತು. ಸಮಾಜದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಹಾಗೂ ಲಿಂಗಾಧಾರಿತ ಶೋಷಣೆಯನ್ನು ತಡೆಯುವ ಮಹತ್ವಾಕಾಂಕ್ಷೆ ಇದರ ಹಿಂದಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಶಿಕ್ಷಣ ಲಭಿಸದಿರುವುದು, ಬಾಲ್ಯ ವಿವಾಹ, ಶೋಷಣೆ, ಆರೋಗ್ಯ ಸೇವೆ ಮತ್ತಿತರ ಸಮಸ್ಯೆಗಳ ಬಗೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜತೆಯಲ್ಲಿ ಹೆಣ್ಣುಮಕ್ಕಳನ್ನು ಸಶಕ್ತರನ್ನಾಗಿಸುವ ಗುರಿಯೊಂದಿಗೆ ಹೆಣ್ಣು ಮಕ್ಕಳ ರಾಷ್ಟ್ರೀಯ ದಿನದ ಆಚರಣೆಗೆ ನಾಂದಿ ಹಾಡಿತು.

ಶಿಕ್ಷಣ, ಆರೋಗ್ಯಕ್ಕೆ ಒತ್ತು
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಂದ ಪಾರು ಮಾಡಬಹುದು ಮತ್ತು ಹೆಣ್ಣು ಮಕ್ಕಳ ಬಗೆಗಿನ ಸಮಾಜದ ಧೋರಣೆಯನ್ನು ಬದಲಾಯಿಸಲು ಸಾಧ್ಯ ಎಂಬ ದೃಷ್ಟಿಕೋನದಿಂದ ಸರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಇದೇ ವೇಳೆ ಅವರ ಆರೋಗ್ಯ ರಕ್ಷಣೆಗೂ ಮಹತ್ವ ನೀಡಲಾಗಿದ್ದು ಅವರಲ್ಲೂ ಸುರಕ್ಷೆಯ ಭಾವ ಮೂಡುವಂತೆ ಮಾಡಲಾಗುತ್ತಿದೆ.

ಕಠಿನ ಕಾನೂನು
ಲಿಂಗ ಅಸಮಾನತೆ, ಹೆಣ್ಣು ಮಕ್ಕಳ ಮೇಲಣ ಶೋಷಣೆ, ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ ಹಲವು ಕಠಿನ ಕಾನೂನುಗಳನ್ನು ಜಾರಿಗೆ ತಂದಿತು. ಜತೆಯಲ್ಲಿ ಹೆಣ್ಣು ಮಕ್ಕಳ ಸುರಕ್ಷೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವ ಕಾನೂನುಗಳನ್ನು ಕೂಡ ಜಾರಿಗೆ ತಂದಿತು. ಇವೆಲ್ಲದರ ಹೊರತಾಗಿಯೂ ದೇಶದ ಹಲವೆಡೆ ಇನ್ನೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆಗಳು ಮುಂದುವರಿದಿರುವುದು ಒಂದಿಷ್ಟು ಆತಂಕಕಾರಿ ಬೆಳವಣಿಗೆಯೇ ಸರಿ.

-ಭಾರತದಲ್ಲಿ ಪ್ರತೀ ವರ್ಷ 25 ಮಿಲಿಯನ್‌ ಹೆಣ್ಣು ಮಕ್ಕಳ ಜನನವಾಗುತ್ತಿದ್ದು, ಇದು ಪ್ರಪಂಚದ ವಾರ್ಷಿಕ ಹೆಣ್ಣುಮಕ್ಕಳ ಜನನ ಪ್ರಮಾಣದ 1/5 ರಷ್ಟು.
-ವಿಶ್ವದ ಅಂಕಿಅಂಶವನ್ನು ಪರಿಗಣಿಸಿದಲ್ಲಿ ಭಾರತದಲ್ಲಿ ಪ್ರತೀವರ್ಷ ಗಂಡು ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಸಾವನ್ನಪ್ಪುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next