Advertisement

ರಿಬ್ಬನ್‌ನಿಂದ ರಾಷ್ಟ್ರಧ್ವಜ!

09:52 AM Aug 15, 2019 | mahesh |

ಜಾದೂಗಾರ ಒಂದು ಖಾಲಿ ಬೆಂಕಿಪೊಟ್ಟಣದೊಳಗೆ ಕೇಸರಿ, ಬಿಳಿ, ಹಸಿರು, ನೀಲಿ ರಿಬ್ಬನ್‌ಗಳನ್ನು ಹಾಕಿ ಮುಚ್ಚುತ್ತಾನೆ. ಎಲ್ಲರೂ ವಂದೇ ಮಾತರಂ ಎಂಬ ಉದ್ಘೋಷವನ್ನು ಮಾಡುತ್ತಿದ್ದಂತೆಯೇ ಬೆಂಕಿ ಪೊಟ್ಟಣವನ್ನು ತೆರೆದಾಗ ರಿಬ್ಬನ್‌ಗಳು ನಮ್ಮ ರಾಷ್ಟ್ರಧ್ವಜವಾಗಿ ಬದಲಾವಣೆಯಾಗಿರುತ್ತವೆ!

Advertisement

ರಹಸ್ಯ:
ಇದಕ್ಕೆ ಬೇಕಾದ ವಸ್ತುಗಳು: ಒಂದು ದೊಡ್ಡ ಬೆಂಕಿಪೊಟ್ಟಣ. ಸುಮಾರು ಮೂರು ಇಂಚ್‌ ಉದ್ದದ ಕೇಸರಿ, ಬಿಳಿ, ಹಸಿರು, ನೀಲಿ ಬಣ್ಣದ ಹತ್ತಿ ಬಟ್ಟೆಯ ರಿಬ್ಬನ್‌ಗಳು, ಒಂದು ರಾಷ್ಟ್ರಧ್ವಜ (ಇದನ್ನು ಚಿಕ್ಕದಾಗಿ ಮಡಚಿದಾಗ, ಬೆಂಕಿಪೊಟ್ಟಣದ ಅರ್ಧ ಭಾಗದಲ್ಲಿ ಕೂರುವಂತಿರಬೇಕು), ಒಂದು ರಟ್ಟಿನ ತುಂಡು.

ಬೆಂಕಿ ಪೊಟ್ಟಣದ ಡ್ರಾಯರನ್ನು ತೆಗೆದು ಅದರೊಳಗಿನ ಕಡ್ಡಿಗಳನ್ನು ಖಾಲಿ ಮಾಡಿ. ಡ್ರಾಯರಿನ ಅರ್ಧಭಾಗಕ್ಕೆ ಒಂದು ರಟ್ಟಿನ ತುಂಡನ್ನು ಅಡ್ಡಕ್ಕೆ ಇಟ್ಟು ಎರಡು ಪ್ರತ್ಯೇಕ ಭಾಗಗಳಾಗುವಂತೆ ಮಾಡಿ. ಒಂದು ಭಾಗದಲ್ಲಿ ರಾಷ್ಟ್ರಧ್ವಜವನ್ನು ಮಡಚಿ ಇಟ್ಟು ಡ್ರಾಯರನ್ನು ಬೆಂಕಿ ಪೊಟ್ಟಣದ ಹೊರ ಹೊದಿಕೆಯೊಳಗೆ ಇಟ್ಟು ಮುಚ್ಚಿ. ಇಷ್ಟನ್ನು ನೀವು ಮೊದಲೇ ಸಿದ್ಧಪಡಿಸಿಟ್ಟುಕೊಂಡಿರಬೇಕು.

ಪ್ರದರ್ಶನದ ಸಮಯದಲ್ಲಿ ಧ್ವಜ ಇರುವ ಬದಿಯು ನಿಮ್ಮ ಕಡೆಗೆ ಇರುವಂತೆ ಬೆಂಕಿ ಪೊಟ್ಟಣವನ್ನು ಹಿಡಿದು ಅದನ್ನು ಅರ್ಧಕ್ಕಿಂತಲೂ ಕಡಿಮೆ ತೆರೆದು ಒಳಗಡೆ ಖಾಲಿ ಎಂಬುದಾಗಿ ಬೆಂಕಿ ಪೊಟ್ಟಣದ ಇನ್ನೊಂದು ತುದಿಯನ್ನು ಪ್ರೇಕ್ಷಕರಿಗೆ ತೋರಿಸಿ. ಆ ಖಾಲಿ ಭಾಗದಲ್ಲಿ ರಿಬ್ಬನ್‌ಗಳನ್ನು ಒಂದೊಂದಾಗಿ ಹಾಕಿ ಪೊಟ್ಟಣವನ್ನು ಮುಚ್ಚಿ. ಪ್ರೇಕ್ಷಕರೆಲ್ಲರಿಗೂ “ಭಾರತ್‌ ಮಾತಾಕೀ ಜೈ, ವಂದೇ ಮಾತರಂ’ ಎಂದು ಗಟ್ಟಿಯಾಗಿ ಹೇಳಲು ಹೇಳಿ. ಅವರು ಈ ಘೋಷಣೆ ಹೇಳಲು ಮೈಮರೆತಾಗ, ಅವರ ಗಮನಕ್ಕೆ ಬಾರದಂತೆ ಧ್ವಜರುವ ತುದಿಯು ಪ್ರೇಕ್ಷಕರ ಕಡೆಗಿರುವಂತೆ ಬೆಂಕಿ ಪೊಟ್ಟಣವನ್ನು ತಿರುಗಿಸಿ. ಅದನ್ನು ತೆರೆದು ಧ್ವಜವನ್ನು ಹೊರತೆಗೆದು ಸರಿಯಾದ ಕ್ರಮದಲ್ಲಿ ಅದನ್ನು ಬಿಡಿಸಿ ಹಿಡಿದುಕೊಳ್ಳಿ. ಈಗ ಪ್ರೇಕ್ಷಕರ ಕೂಗು ಮುಗಿಲು ಮುಟ್ಟುವುದರಲ್ಲಿ ಸಂಶಯವಿಲ್ಲ.

ನಿರೂಪಣೆ: ಉದಯ್‌ ಜಾದೂಗಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next