ಸಾಗರ: ರಾಷ್ಟ್ರಧ್ಜಜದ ಮೂಲಕ ಮನಸ್ಸು ಕಟ್ಟುವ, ದೇಶಭಕ್ತಿ ವೃದ್ಧಿಸುವ ಹಾಗೂ ಭಾರತೀಯತೆಯನ್ನು ಬೆಸೆಯಲು ಸಾಧ್ಯವಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಗಾಂಧಿಮೈದಾನದ ನಗರಸಭೆ ರಂಗಮಂದಿರದಲ್ಲಿ ಭಾನುವಾರ ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ಆ. 13ರಿಂದ 15 ರವರೆಗೆ ಪ್ರತಿ ಮನೆಯ ಮೇಲೂ ತ್ರಿವರ್ಣ ರಾಷ್ಟ್ರಧ್ವಜ ಹಾರಿಸಲು 50 ಸಾವಿರ ರಾಷ್ಟ್ರಧ್ವಜ ಕಟ್ಟುವ ಕೆಲಸಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರದ ಪ್ರತಿಯೊಂದು ಮನೆಯ ಮೇಲೂ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಈ ರಾಷ್ಟ್ರೀಯ ಕಾರ್ಯಕ್ರಮ ನೆನಪಿನಲ್ಲಿ ಉಳಿಯುವಂತೆ ಆಚರಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ತ್ರಿವರ್ಣ ರಾಷ್ಟ್ರಧ್ವಜ ಭಾರತೀಯರ ಸ್ವಾಭಿಮಾನದ ಸಂಕೇತ. ಅದು ಮೂರು ದಿನ ನಮ್ಮ ಮನೆಯ ಮೇಲೆ ಹಾರಾಡುತ್ತಿದ್ದರೆ ನಾವು ಪುನೀತರಾಗುವ ಜೊತೆಗೆ ರಾಷ್ಟ್ರಕಟ್ಟುವ ಕಾರ್ಯದಲ್ಲಿ ನಾವು ತೊಡಗಿಸಿಕೊಂಡಂತೆ ಆಗುತ್ತದೆ ಎಂದು ಹೇಳಿದರು.
ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 50 ಸಾವಿರ ರಾಷ್ಟ್ರಧ್ವಜವನ್ನು ಎಲ್ಲ ಮನೆಗಳಿಗೂ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಇಂದು ಅಧಿಕೃತವಾಗಿ ಧ್ವಜ ತಯಾರಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ನಾವು ನೀಡಿದ ರಾಷ್ಟ್ರಧ್ವಜ ಮನೆಯ ಮೇಲೆ ಹಾರಿಸಲು ಅವಕಾಶವಾಗುವಂತೆ ಎಲ್ಲ ರೀತಿಯ ಸಿದ್ಧತೆ ಮಾಡಿ ವಿತರಣೆ ಮಾಡಲಾಗುತ್ತಿದೆ. ಇಂದಿನ ಮಕ್ಕಳಿಗೆ ರಾಷ್ಟ್ರಧ್ವಜದ ಮಹತ್ವ ಅರ್ಥವಾಗುತ್ತಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆ ರಾಷ್ಟ್ರ, ರಾಷ್ಟ್ರಧ್ವಜದ, ಭಾರತೀಯತೆ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ಮೈತ್ರಿ ಪಾಟೀಲ್, ಕುಸುಮ ಸುಬ್ಬಣ್ಣ, ನಾದಿರಾ ಪರ್ವಿನ್, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ಪೌರಾಯುಕ್ತ ರಾಜು ಡಿ. ಬಣಕಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಪ್ರಮುಖರಾದ ಲೋಕನಾಥ್ ಬಿಳಿಸಿರಿ, ಸಂತೋಷ್ ಶೇಟ್, ಪುರುಷೋತ್ತಮ್, ಸತೀಶ್ ಕೆ. ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಚಾರ್ಯರು, ಸಂಘಸಂಸ್ಥೆಗಳ ಪ್ರಮುಖರು ಹಾಜರಿದ್ದರು.