ಹಾನಗಲ್ಲ: ದೇಶದಲ್ಲಿ 996 ವಿಶ್ವವಿದ್ಯಾಲಯ ಹಾಗೂ 34,500 ಕಾಲೇಜುಗಳಿವೆ. ಈಗ ತಾಲೂಕು ಮಟ್ಟದಲ್ಲಿಯೇ ಉನ್ನತ ಶಿಕ್ಷಣ ದೊರಕುವಂತಾಗಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿದ್ದು, ಬಡವರಿಗೂ ಕೈಗೆಟುಕುವ ಶಿಕ್ಷಣ ಲಭ್ಯವಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ಹೊರವಲಯದ ಮಲ್ಲಿಗ್ಗಾರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ಕರ್ನಾಟಕ ಗೃಹ ಮಂಡಳಿಯಿಂದ ಮಂಜೂರಾದ 2.14 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ, ಮೂಲ ಸೌಕರ್ಯಗಳ ನಿರ್ಮಾಣ, ವಿದ್ಯಾರ್ಥಿಗಳ ವಿಶ್ರಾಂತಿ ಕೊಠಡಿ ಕಾಮಗಾಗಳಿಗೆ ಚಾಲನೆ ನೀಡಿ ಮಾತನಾಡಿರು.
ತಂತ್ರಜ್ಞಾನ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬದಲಾಗುತ್ತಿದೆ. ಉನ್ನತ ಶಿಕ್ಷಣ ಹಾಗೂ ತಂತ್ರಜ್ಞಾನ ಆವಿಷ್ಕಾರವಾದಂತೆ ಕಲಿಕೆ ನಿರಂತರವಾಗಿರಬೇಕು. ದೇಶದಲ್ಲಿ 130 ಕೋಟಿ ಜನರಿಗೆ ಕೇವಲ 13 ಕೋಟಿ ವೈದ್ಯರಿದ್ದಾರೆ. ವೈದ್ಯರ ಕೊರತೆ ಹೆಚ್ಚು ಕಾಡಲಾರಂಭಿಸಿದೆ. ಪ್ರವೇಶ, ನ್ಯಾಯ-ನೀತಿ, ಧರ್ಮಗಳ ಸಮಾನತೆ, ಗುಣಮಟ್ಟದ ಶಿಕ್ಷಣ, ಕೈಗೆಟುಕುವ ಶಿಕ್ಷಣ, ಹೊಣೆಗಾರಿಕೆ ಎಂಬ 5 ಬದಲಾವಣೆಗಳು ಹೊಸ ಶಿಕ್ಷಣ ನೀತಿಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಜಾರಿಗೊಳ್ಳುತ್ತಿವೆ. ಸುಸ್ಥಿರ ಜೀವನಕ್ಕೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ವಿದ್ಯಾರ್ಥಿಗಳು ಸ್ಥಳೀಯವಾಗಿ ಲಭ್ಯವಿರುವ ಮೂಲ ಶಿಕ್ಷಣ ಪೂರೈಸಿ ಹಿಂದುಳಿಯದೇ, ಮುಂದಿನ ಶಿಕ್ಷಣಕ್ಕೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಮ್ಮದ್‌ಶರೀಫ್ ಹಾನಗಲ್ಲ, ಸಾಂವಸಗಿ ಗ್ರಾಪಂ ಅಧ್ಯಕ್ಷೆ ಸಾಲೇಹಾಬಾನು ಮುಲ್ಲಾ, ಉಪಾಧ್ಯಕ್ಷೆ ಧರ್ಮವ್ವ ಲಮಾಣಿ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಸದಸ್ಯ ಬಸವರಾಜ ಬೂದಿಹಾಳ, ಪದ್ಮನಾಭ ಕುಂದಾಪುರ, ಕಲ್ಯಾಣಕುಮಾರ ಶೆಟ್ಟರ,ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜು ಗೌಳಿ, ಇಒ ಚನ್ನಪ್ಪ ರಾಯಣ್ಣನವರ ಇದ್ದರು.
ಇದೇ ಸಂದರ್ಭದಲ್ಲಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಪಟ್ಟಣದ ಧರ್ಮಾನದಿ ಸಮೀಪದ ಹಳ್ಳಕ್ಕನವರ ಅವರ ಜಮೀನಿನಿಂದ ವಸಂತ ಕಂಕಾಳೆ ಅವರ ತೋಟದವರೆಗೆ ಜಲ ಸಂಪನ್ಮೂಲ ಇಲಾಖೆ ಹಾಗೂ ಭದ್ರಾ ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿ ಕಾರದಿಂದ ಮಂಜೂರಾದ 9 ಲಕ್ಷ ರೂ. ವೆಚ್ಚದ 1 ಕಿಮಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.