Advertisement

ರಾಷ್ಟ್ರೀಯ ಶಿಕ್ಷಣ ನೀತಿ 2020: ಉನ್ನತ ಶಿಕ್ಷಣ ಇನ್ನು ಹೆಚ್ಚು ವೃತ್ತಿಪರ, ಸಂಶೋಧನೆ ಪರ

04:08 AM Aug 01, 2020 | Hari Prasad |

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಸ್ತಾವನೆ ಇದೆ. ಉನ್ನತ ಶಿಕ್ಷಣ ಎಂಬುದು ಕೇವಲ ಆಸಕ್ತಿಗಾಗಿ ಮಾಡುವ ಪದವಿಯಷ್ಟೆ ಎಂಬ ಜನಾಭಿಪ್ರಾಯವನ್ನು ಬದಲಿಸಿ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ವೃತ್ತಿಪರವಾಗಿರುವಂತೆ, ಸಂಶೋಧನ ಪರವಾಗಿರುವಂತೆ ರೂಪಿಸಲು ನಿರ್ಧರಿಸಲಾಗಿದೆ.

Advertisement

ಒಂದೇ ಪ್ರವೇಶ ಪರೀಕ್ಷೆೆ
ಪ್ರೌಢಶಿಕ್ಷಣ ಹಂತ ಮುಗಿಸಿ, ಪದವಿ ಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಯು, ಇನ್ನು ಬೇರೆ ಬೇರೆ ಪರೀಕ್ಷೆಗಳನ್ನು ಎದುರಿಸುವ ಅಗತ್ಯ ಇಲ್ಲ. ರಾಷ್ಟ್ರ ಮಟ್ಟದಲ್ಲಿ ನಡೆಯುವ ಒಂದೇ ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕಿರುತ್ತದೆ. ಆ ಪರೀಕ್ಷೆಯಲ್ಲಿನ ಸಾಧನೆಯನ್ನು ಪರಿಗಣಿಸಿ, ಆತ ತನ್ನಿಷ್ಟದ ಪದವಿ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಈ ಪ್ರವೇಶ ಪರೀಕ್ಷೆ ಕಡ್ಡಾಯವಲ್ಲ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ.

ಯಾವಾಗ ಬೇಕಾದರೂ ನಿರ್ಗಮಿಸಿ
ಪದವಿ ಶಿಕ್ಷಣ ಇನ್ನು, ಮೂರು ಅಥವಾ ನಾಲ್ಕು ವರ್ಷದ್ದಾಗಿರುತ್ತದೆ. ಸಾಮಾನ್ಯ ವಿಷಯಾಧಾರಿತ ಪದವಿಯಾಗಿದ್ದರೆ ಮೂರು ವರ್ಷ, ತಾಂತ್ರಿಕ ಪದವಿಯಾಗಿದ್ದರೆ ನಾಲ್ಕು ವರ್ಷ. ಇಲ್ಲಿ ಬಹು ನಿರ್ಗಮನ (ಮಲ್ಟಿ ಎಕ್ಸಿಟ್‌) ಸೌಲಭ್ಯವನ್ನು ನೀಡಲಾಗುತ್ತದೆ. ಈ ಯಾವುದೇ ಅವಧಿಯಲ್ಲಿ ವಿದ್ಯಾರ್ಥಿಯು ಅರ್ಧಕ್ಕೆ ವ್ಯಾಸಂಗ ತೊರೆದರೆ ಆತನ ಕಲಿಕೆಯ ಮಟ್ಟಕ್ಕೆ ತಕ್ಕಂತೆ ಪ್ರಮಾಣ ಪತ್ರ ನೀಡಲಾಗುತ್ತದೆ. ಅಂದರೆ, ಪದವಿ ವ್ಯಾಸಂಗದ ಮೊದಲ ವರ್ಷ ಮುಗಿಸಿದ ವಿದ್ಯಾರ್ಥಿಯೊಬ್ಬ ವ್ಯಾಸಂಗ ತೊರೆದರೆ ಆತನಿಗೆ ಆ ಮೊದಲ ವರ್ಷದ ಪದವಿ ಶಿಕ್ಷಣ ಮುಗಿಸಿದ ಬಗ್ಗೆ ಪ್ರಮಾಣ ಪತ್ರ ಸಿಗುತ್ತದೆ.

ಹಾಗೆಯೇ, ದ್ವಿತೀಯ ವರ್ಷ ಮುಗಿಸಿದ ನಂತರ ತೊರೆದರೆ ಅದಕ್ಕೆ ಡಿಪ್ಲೋಮಾಗೆ ತತ್ಸಮಾನವಾದ ಪ್ರಮಾಣ ಪತ್ರ ನೀಡಲಾಗುತ್ತದೆ. ಇನ್ನು, ಯಥಾವತ್ತಾಗಿ ಮೂರು ವರ್ಷದ ನಂತರ ಪದವಿ ಮುಗಿಸಿದರೆ ಪೂರ್ಣ ಪ್ರಮಾಣದ ಪದವಿ ಪತ್ರ ಸಿಗುತ್ತದೆ. ಮತ್ತೂಂದೆಡೆ, ವೃತ್ತಿಪರ ಶಿಕ್ಷಣ ನಾಲ್ಕು ವರ್ಷದ್ದಾಗಿರುತ್ತದೆ. ಇಲ್ಲಿಯೂ ಮಲ್ಟಿ ಎಕ್ಸಿಟ್‌ ಸೌಲಭ್ಯ ಇರಲಿದೆ. ಆದರೆ, ಪೂರ್ಣ ಪದವಿ ಮುಕ್ತಾಯದ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಯು ಪ್ರಾಜೆಕ್ಟ್ ಮುಗಿಸು ವುದು ಕಡ್ಡಾಯವಾಗಿರುತ್ತದೆ. ಆದರೆ, ಇಂಜಿನಿಯರಿಂಗ್‌, ವೈದ್ಯಕೀಯ, ಫಾರ್ಮಸಿ, ಕಾನೂನು ಸ್ನಾತಕ ಪದವಿ ವ್ಯಾಸಂಗದ ಅವಧಿ ನಾಲ್ಕು ವರ್ಷ ಮೀರಲಿದೆ.

ಸ್ನಾತಕೋತ್ತರದಲ್ಲಿ ಅನುಕೂಲ
ಸ್ನಾತಕೋತ್ತರ ಪದವಿ ವ್ಯಾಸಂಗವನ್ನು ವಿದ್ಯಾರ್ಥಿಗಳ ಸಂಶೋಧನಾ ದೃಷ್ಟಿಯಿಂದ ರೂಪಿಸಲು ನಿರ್ಧರಿಸಲಾಗಿದೆ. ಮೂರು ವರ್ಷದ ಸ್ನಾತಕ ಪದವಿ ಮುಗಿಸಿದವರು, ಆನಂತರ ಎರಡು ವರ್ಷದ ಸ್ನಾತಕೋತ್ತರ ಪದವಿಗೆ ಕಾಲಿಟ್ಟಾಗ, 2ನೇ ವರ್ಷದ ಅವಧಿಯನ್ನು ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಿಡಬಹುದು. ಸಂಶೋಧನೆಯ ಉದ್ದೇಶದಿಂದ, ಕೆಲವು ವಿದ್ಯಾಸಂಸ್ಥೆಗಳು, ಒಂದು ನಿರ್ದಿಷ್ಟ ವಿಷಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವ್ಯಾಸಂಗಗಳನ್ನು ಸಮ್ಮಿಳಿತಗೊಳಿಸಿ ಇಂಟಿಗ್ರೇಟೆಡ್‌ ಕೋರ್ಸ್‌ಗಳನ್ನಾಗಿ ಮಾಡಬಹುದು. ಹಾಗಾಗಿಯೇ, ಎಂ.ಫಿಲ್‌ ಎಂಬ ಪ್ರತ್ಯೇಕ ಸಂಶೋಧನಾ ವ್ಯಾಸಂಗ ಅನಗತ್ಯ ವಾಗಿದ್ದು, ಅದನ್ನು ರದ್ದುಗೊಳಿಸಲಾಗಿದೆ.

Advertisement

ನಳಂದಾ, ತಕ್ಷಶಿಲಾ ಮಿಷನ್‌
ನೂತನವಾಗಿ ಸ್ಥಾಪಿಸಲ್ಪಡುವ ಉನ್ನತ ಶಿಕ್ಷಣ ಸಂಸ್ಥೆಗಳ ರೂಪುರೇಷೆಗಳನ್ನು ನಿರ್ಧರಿಸಲು ನಳಂದಾ ಮಿಷನ್‌ ಹಾಗೂ ತಕ್ಷಶಿಲಾ ಮಿಷನ್‌ ಎಂಬ ಎರಡು ಪ್ರಚಾರ ಅಭಿಯಾನಗಳನ್ನು ರೂಪಿಸಲಾಗುತ್ತದೆ. ಇವುಗಳ ಅಡಿಯಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಲಿಬರಲ್‌ ಆರ್ಟ್ಸ್ ಹಾಗೂ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಈ ಎಲ್ಲ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಪದವಿ ಪ್ರದಾನ ಮಾಡಬಲ್ಲ ಸ್ವಾಯತ್ತ ಕಾಲೇಜುಗಳಾಗಿರುತ್ತವೆ.

ಒಂದೇ ಆಡಳಿತದಡಿ ಉನ್ನತ ಶಿಕ್ಷಣ
ಈವರೆಗೆ ಸಾಮಾನ್ಯ ಪದವಿ ಶಿಕ್ಷಣದ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯು.ಜಿ.ಸಿ.) ಹೊಂದಿದೆ. ಇನ್ನು, ತಾಂತ್ರಿಕ ಶಿಕ್ಷಣದ ಜವಾಬ್ದಾರಿಯನ್ನು ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹೊತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ದೇಶಾದ್ಯಂತ ಉನ್ನತ ಶಿಕ್ಷಣಕ್ಕೆ (ಸಾಮಾನ್ಯ ಪದವಿ ಹಾಗೂ ತಾಂತ್ರಿಕ ಪದವಿ) ಒಂದೇ ಆಡಳಿತ ಜಾರಿಗೆ ಬರಲಿದೆ. ಅದಕ್ಕಾಗಿ, ಭಾರ ತೀಯ ಉನ್ನತ ಶಿಕ್ಷಣ ಆಯೋಗ ವನ್ನು (ಎಚ್‌ಇಸಿಐ) ರಚಿಸಲಾಗುತ್ತದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು, ಉನ್ನತ ಶಿಕ್ಷಣ ಧನಸಹಾಯ ಸಮಿತಿ ಎಂದು ಕರೆಯಲ್ಪಡುತ್ತದೆ.

ಭಾರತೀಯ ಉನ್ನತ ಶಿಕ್ಷಣ ಆಯೋಗದ ಅಡಿಯಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಕೌನ್ಸಿಲ್‌, ರಾಷ್ಟ್ರೀಯ ಅಕ್ರೆಡಿಷನ್‌ ಕೌನ್ಸಿಲ್‌ (ನ್ಯಾಕ್‌), ಉನ್ನತ ಶಿಕ್ಷಣ ಅನುದಾನ ಕೌನ್ಸಿಲ್‌ (ಎಚ್‌ಇಜಿಸಿ) ಹಾಗೂ ಸಾಮಾನ್ಯ ಶಿಕ್ಷಣ ಕೌನ್ಸಿಲ್‌ (ಜಿಇಸಿ) ಕಾರ್ಯ ನಿರ್ವಹಿಸಲಿವೆ. ಇನ್ನು, ವೃತ್ತಿಪರ ಕೌನ್ಸಿಲ್‌ಗ‌ಳಾದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಅಗ್ರಿಕಲ್ಚರಲ್‌ ರಿಸರ್ಚ್‌ (ಸಿಐಎಆರ್‌), ವೆಟರ್ನರಿ ಕೌನ್ಸಿಲ್‌ ಆಫ್ ಇಂಡಿಯಾ (ವಿಸಿಐ), ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಶನ್‌ (ಎನ್‌ಸಿಟಿಇ), ಕೌನ್ಸಿಲ್‌ ಆಫ್ ಆರ್ಕಿ ಟೆಕ್ಚರ್‌ (ಸಿಒಎ), ನ್ಯಾಷನಲ್‌ ಕೌನ್ಸಿಲ್‌ ಫಾರ್‌ ವೊಕೇ ಷನಲ್‌ ಎಜುಕೇಷನ್‌ ಆ್ಯಂಡ್‌ ಟ್ರೈನಿಂಗ್‌ (ಎನ್‌ಸಿವಿಇಟಿ) ಹಾಗೂ ಇನ್ನಿತರ ಮಂಡಳಿಗಳು, ಕೌನ್ಸಿಲ್‌ಗ‌ಳು ಇನ್ನು, ಪ್ರೊಫೆಷನಲ್‌ ಸ್ಟಾಂಡರ್ಡ್‌ ಸೆಟ್ಟಿಂಗ್‌ ಬಾಡೀಸ್‌ (ಪಿಎಸ್‌ಎಸ್‌ಬಿ) ಆಗಿ ಕಾರ್ಯ ನಿರ್ವಹಿಸಲಿವೆ.
ಆದರೆ, ಕಾನೂನು ಪದವಿ ವ್ಯಾಸಂಗ ಹಾಗೂ ವೈದ್ಯಕೀಯ ವ್ಯಾಸಂಗವನ್ನು ಈ ಆಯೋಗದಿಂದ ಹೊರಗಿಡಲಾಗಿದೆ. ಅವು, ಈಗಿರುವಂತೆಯೇ ಪ್ರತ್ಯೇಕ ಆಡಳಿತ ವ್ಯವಸ್ಥೆಗಳಡಿ ಮುಂದುವರಿಯಲಿವೆ.

ಮೂರು ರೀತಿಯ ಉನ್ನತ ಶಿಕ್ಷಣ
ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ.
1ನೇ ವಿಧ: ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಉತ್ತಮ ಗುಣಮಟ್ಟದ ಬೋಧನಾ ವ್ಯವಸ್ಥೆ ಹೊಂದಿರುವ ಸಂಸ್ಥೆಗಳು.

2ನೇ ವಿಧ: ಉನ್ನತ ಮಟ್ಟದ ಬೋಧನೆಗೆ ಗಮನಾರ್ಹ ಕೊಡುಗೆ ನೀಡುವ ಸಂಸ್ಥೆಗಳು.

3ನೇ ವಿಧ: ಪದವಿ ಶಿಕ್ಷಣಕ್ಕೆ ಗಮನ ಹರಿಸುವ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಗಮನ ಕೇಂದ್ರೀಕರಿಸುವ ಸಂಸ್ಥೆಗಳು.

ಸಾರ್ವಜನಿಕ ಹೂಡಿಕೆಗೆ ಅವಕಾಶ
ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಯಾವ ಪ್ರಾಂತ್ಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳಿಲ್ಲವೋ ಅಂಥ ಪ್ರದೇಶಗಳಲ್ಲಿ ಸಾರ್ವಜನಿಕ ಹೂಡಿಕೆ ಆಧಾರದಡಿ ಉನ್ನತ ಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸಿ, ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲಾಗುತ್ತದೆ. ಹಲವು ವಿಷಯ ಬೋಧನಾ ಕ್ರಮಗಳನ್ನು ಈ ಶಿಕ್ಷಣ ಸಂಸ್ಥೆಗಳಲ್ಲಿಯೂ ಅಳವಡಿಸಲಾಗುತ್ತದೆ.

ಹೆಚ್ಚಿನ ಸ್ವಾಯತ್ತೆೆಗೆ ನಿರ್ಧಾರ
ಉನ್ನತ ವಿದ್ಯಾಸಂಸ್ಥೆಗಳನ್ನು ಸ್ವಾಯತ್ತ ಪದವಿ ಪ್ರದಾನ ಶಿಕ್ಷಣ ಸಂಸ್ಥೆಗಳೆಂದು ಪರಿಗಣಿಸಲಾಗುತ್ತದೆ. ಇನ್ನು, ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳನ್ನು 2040ರ ಹೊತ್ತಿಗೆ ಸಂಶೋಧನಾ ಸಂಸ್ಥೆಗಳನ್ನಾಗಿ ಪರಿವರ್ತಿಸಲಾಗುತ್ತದೆ. ಸ್ನಾತಕ ಪದವಿ ಕಾಲೇಜುಗಳಿಗೆ, ಶೈಕ್ಷಣಿಕವಾಗಿ, ಆಡಳಿ ತಾತ್ಮಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚಿನ ಸ್ವಾಯತ್ತತೆ ನೀಡಲಾಗುವುದು. ರಾಷ್ಟ್ರೀಯ ಮಟ್ಟದಲ್ಲಿ ಆ ಸಂಸ್ಥೆಗಳು ಗಳಿಸುವ ಅಕ್ರೆಡಿಟೇಶನ್‌ (ಮಾನ್ಯತೆ) ಆಧಾರದಲ್ಲಿ ಆ ಸವಲತ್ತುಗಳನ್ನು ನೀಡಲಾಗುತ್ತದೆ.

ಇನ್ನು, ದೇಶದ ಎಲ್ಲ ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ತಮ್ಮ ಸಿಬಂದಿ ಕೌಶಲ್ಯ ಅಭಿವೃದ್ಧಿಗೊಳಿಸುವ ತರಬೇತಿ ಕೇಂದ್ರಗಳು ರೂಪುಗೊಳ್ಳಲಿವೆ. ಅಲ್ಲದೆ, ತಮ್ಮ ಕಾಲೇಜುಗಳಲ್ಲಿನ ಬೋಧಕ ಸಿಬಂದಿಯ ಸಾಮರ್ಥಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪದವಿ ಕಾಲೇಜುಗಳಲ್ಲೇ ಶಿಕ್ಷಕರ/ಪ್ರಾಧ್ಯಾಪಕರ ತರಬೇತಿ ಕೇಂದ್ರಗಳನ್ನು ಹೊಂದಬೇಕಾಗುತ್ತದೆ. ಸರಕಾರದಲ್ಲಿ ನೋಂದಾಯಿಸಲ್ಪಟ್ಟಿರುವ 45,000 ಪದವಿ ಕಾಲೇಜುಗಳಲ್ಲಿ ಇಂಥ ವ್ಯವಸ್ಥೆಯು 2030ರೊಳಗೆ ಜಾರಿಗೆ ಬರಲಿದೆ.

ವಿದೇಶಿ ವಿವಿಗಳಿಗೆ ಅವಕಾಶ
ವಿಶ್ವದ ಟಾಪ್‌ 100 ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆದು ಭಾರತೀಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಪೂರಕವಾಗಿ, ಆ ವಿವಿಗಳಿಗೆ, ಭಾರತದಲ್ಲಿ ತಮ್ಮ ಶಾಖೆಗಳು ಅಥವಾ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಆಡಳಿತಾತ್ಮಕ ವಿಚಾರಗಳಲ್ಲಿ ವಿನಾಯ್ತಿ ನೀಡಲಾಗಿದೆ. ಇದರ ಜೊತೆಯಲ್ಲೇ, ಭಾರತೀಯ ವಿಶ್ವವಿದ್ಯಾಲಯಗಳಿಗೆ ವಿದೇಶಗಳಲ್ಲಿ ಶಾಖೆಗಳನ್ನು ತೆರೆಯಲು ಅನುಕೂಲ ಮಾಡಿಕೊಡಲಾಗಿದೆ.

ಸಂಶೋಧನೆಯ ಅವಲೋಕನ, ಅಳವಡಿಕೆ
ವಿದ್ಯಾರ್ಥಿಗಳ ಸಂಶೋಧನಾ ವರದಿಗಳನ್ನು ಸಂಬಂಧಿಸಿದ ಇಲಾಖೆಗಳ ಅವಗಾಹನೆಗೂ ಕಳಿಸುವಂಥ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಕೆಲವು ಉತ್ತಮ ಸಂಶೋಧನೆಗಳಿದ್ದಲ್ಲಿ ಅವುಗಳನ್ನು ಕೇಂದ್ರ ಸರಕಾರದ ಇಲಾಖೆಗಳಲ್ಲಿ ಅಳವಡಿಸುವಂಥ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ದೂರಶಿಕ್ಷಣಕ್ಕೆ ಹೆಚ್ಚಿನ ಒತ್ತು
ದೂರ ಹಾಗೂ ಮುಕ್ತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು ಶೇ. 50ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ತರಗತಿಗಳಲ್ಲಿ ನಡೆಯುವ ಕೋರ್ಸ್‌ಗಳನ್ನೇ ಹೆಚ್ಚಾಗಿ ಮುಕ್ತ ಹಾಗೂ ದೂರಶಿಕ್ಷಣ ವ್ಯಾಪ್ತಿಯಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ.

ಪಿಎಚ್‌ಡಿ ಉಸ್ತುವಾರಿಗೆ ಹೊಸ ಸಮಿತಿ ರಚನೆ
ಹೊಸ ಶಿಕ್ಷಣ ನೀತಿಯಲ್ಲಿ ಎಂ.ಫಿಲ್‌ ರದ್ದಾಗಿದೆ. ಪಿಎಚ್‌.ಡಿಯನ್ನು ಮುಂದುವರಿಸಲಾಗಿದ್ದು, ಆದರೆ ಈವರೆಗೆ ಪಿಎಚ್‌.ಡಿ ಮೇಲುಸ್ತುವಾರಿ ಹೊಂದಿದ್ದ ಯುಜಿಸಿ ರದ್ದಾಗಲಿರುವುದರಿಂದ ಸಂಶೋಧನೆಗಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆಯಾಗುತ್ತದೆ. ಭಾರತೀಯ ಸಂಶೋಧನಾ ಕೌನ್ಸಿಲ್‌ ಹೆಸರಿನ ಹೊಸ ಮಂಡಳಿಯೊಂದು ಅಸ್ತಿತ್ವಕ್ಕೆ ಬರಲಿದ್ದು, ಆ ಮಂಡಳಿಯೇ ಇನ್ನು ಪಿಎಚ್‌.ಡಿ ಅಧ್ಯಯನದ ಮೇಲುಸ್ತುವಾರಿ ವಹಿಸಿಕೊಳ್ಳಲಿದೆ.

ಇನ್ನು, ಪಿಎಚ್‌.ಡಿ ಅರ್ಹತೆ ವಿಚಾರಕ್ಕೆ ಬರುವುದಾದರೆ ಸಾಮಾನ್ಯವಾಗಿ ಮೂರು ವರ್ಷಗಳ ಸ್ನಾತಕ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿಗಳನ್ನು ಮುಗಿಸಿದ ನಂತರ ಪಿಎಚ್‌.ಡಿ ಅಧ್ಯಯನಕ್ಕೆ ಬರಬಹುದು. ಈ ನಿಯಮವನ್ನು ಸರಳಗೊಳಿಸಿ, ನಾಲ್ಕು ವರ್ಷಗಳ ಪದವಿ ಪೂರೈಸಿದರೆ ಪಿಎಚ್‌.ಡಿಗೆ ಬರಬಹುದು ಎಂಬ ನಿಯಮ ಸೇರಿಸಲಾಗಿದೆ. ಹಾಗಾಗಿ, ಮಾನ್ಯತೆ ಪಡೆದ ಇಂಟಿಗ್ರೇಟೆಡ್‌ ಕೋರ್ಸ್‌ಗಳ ಅಡಿಯಲ್ಲಿ, ವಿದ್ಯಾರ್ಥಿಯು ನಾಲ್ಕು ವರ್ಷದ ನಂತರ ಪಿಎಚ್‌.ಡಿ ಸಂಶೋಧನೆಗೆ ವಿದ್ಯಾರ್ಥಿಯು ಮುಂದಾಗಬಹುದು.

ಐಐಟಿಗಳಿಗೂ ಬಹುಶಿಸ್ತೀಯ ನಿಯಮ ಅನ್ವಯ
ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಂಥ (ಐಐಟಿ) ಉನ್ನತ ಶಿಕ್ಷಣ ಸಂಸ್ಥೆಗಳಿಗೂ ಬಹುಶಿಸ್ತೀಯ ಬೋಧನಾ ನಿಯಮ ಅನ್ವಯಿಸುತ್ತದೆ. ಅಲ್ಲಿಯೂ ಕಲೆ ಮತ್ತು ಸಾಂಸ್ಕೃತಿಕ ವಿಷಯಗಳ ಬೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ದೇಶದ ಬಹುತೇಕ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು ವಿಷಯ ಬೋಧನಾ ಶಿಕ್ಷಣ ಸಂಸ್ಥೆಗಳನ್ನಾಗಿ ಮಾರ್ಪಡಿಸುವ ಇರಾದೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next