Advertisement

ಇಂದು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮಹತ್ವ ಏನು? ಆಜಾದ್ ಅವರ ವ್ಯಕ್ತಿಪರಿಚಯ ಇಲ್ಲಿದೆ…

09:48 AM Nov 12, 2019 | Nagendra Trasi |

ಬೆಂಗಳೂರು: ಸ್ವತಂತ್ರ ಭಾರತದ ಪ್ರಪ್ರಥಮ ಶಿಕ್ಷಣ ಸಚಿವ,  ಭಾರತ ರತ್ನ ಡಾ.ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ನವೆಂಬರ್ 11ರಂದು ದೇಶಾದ್ಯಂತ ಆಚರಿಸಲಾಗುತ್ತದೆ.

Advertisement

ಡಾ.ಮೌಲಾನಾ ಅಬ್ದುಲ್ ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ 2008ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರತಿವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ಆಚರಿಸುವ ಬಗ್ಗೆ ನಿರ್ಧರಿಸಿತ್ತು.

ಯಾವುದೇ ಸಾರ್ವತ್ರಿಕ ರಜೆಯನ್ನು ಘೋಷಿಸದೇ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಬೇಕೆಂದು 2008ರ ನವೆಂಬರ್ 11ರಂದು ಮಾನವ ಸಂಪನ್ಮೂಲ(ಎಚ್ ಆರ್ ಡಿ) ಸಚಿವಾಲಯ ಘೋಷಿಸಿತ್ತು.

ಇವರ ಪೂರ್ಣ ಹೆಸರು…ಮೌಲಾನಾ ಸಯ್ಯೀದ್ ಅಬ್ದುಲ್ ಕಲಾಂ ಗುಲಾಂ ಮುಹಿಯೂದ್ದೀನ್ ಅಹ್ಮದ್ ಬಿನ್ ಖೈರುದ್ದೀನ್ ಅಲ್ ಹುಸೈನಿ ಆಜಾದ್ ಎಂಬುದಾಗಿ..ಇವರು ಮೌಲಾನಾ ಆಜಾದ್ ಎಂದೇ ಜನಪ್ರಿಯರಾಗಿದ್ದರು. ಸ್ವರಾಜ್ ಚಿಂತಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಭಾರತದ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನ ಪ್ರಮುಖ ಹಿರಿಯ ಮುಖಂಡರಲ್ಲಿ ಆಜಾದ್ ಕೂಡಾ ಒಬ್ಬರಾಗಿದ್ದರು. ಕೇಂದ್ರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಮೌಲಾನಾ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದರು. ಇವರ ಮುಖ್ಯ ಗುರಿ ಇದ್ದಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂಬುದಾಗಿತ್ತು.

Advertisement

ಶಿಕ್ಷಣ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿ 1922ರಲ್ಲಿ ಮೌಲಾನಾ ಆಜಾದ್ ಅವರಿಗೆ ದೇಶದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಐಐಟಿ ಸ್ಥಾಪನೆಯಲ್ಲಿಯೂ ಆಜಾದ್ ಪ್ರಮುಖರಾಗಿದ್ದರು. ಯುಜಿಸಿ(ಯೂನಿರ್ವಸಿಟಿ ಗ್ರ್ಯಾಂಟ್ಸ್ ಕಮಿಷನ್)ಯನ್ನೂ ಕೂಡಾ ಸ್ಥಾಪಿಸಿದ್ದರು.

1888 ನವೆಂಬರ್ 11ರಂದು ಆಜಾದ್ ಮೆಕ್ಕಾದಲ್ಲಿ ಜನಿಸಿದ್ದರು. ಇವರ ತಂದೆ ದೆಹಲಿಯಲ್ಲಿ ವಾಸವಾಗಿದ್ದರು. 1857ರ ಸಿಪಾಯಿ ದಂಗೆ ಕಾಲದಲ್ಲಿ ಆಜಾದ್ ತಂದೆ ಭಾರತ ತೊರೆದು ಮೆಕ್ಕಾದಲ್ಲಿ ನೆಲೆ ನಿಂತಿದ್ದರು. ಆಜಾದ್ ತಂದೆ ಮೌಲಾನಾ ಸಯ್ಯೀದ್ ಮುಹಮ್ಮದ್ ಖೈರುದ್ದೀನ್ ಬಿನ್ ಅಲ್ ಹುಸೈನಿ 12 ಪುಸ್ತಕಗಳನ್ನು ಬರೆದಿದ್ದರು. ಕಿರಿಯ ವಯಸ್ಸಿಗೆ ಆಜಾದ್ ತಂದೆ ನಿಧನರಾಗಿದ್ದರು. 1890ರ ಸುಮಾರಿಗೆ ಮೌಲಾನಾ ಆಜಾದ್ ಅವರು ತಮ್ಮ ಕುಟುಂಬದ ಜತೆ ಕೋಲ್ಕತಾಕ್ಕೆ ಬಂದು ನೆಲೆಸಿದ್ದರು. ಮೌಲಾನಾ ಅವರು ಉರ್ದು ವಿದ್ವಾಂಸರಾಗಿದ್ದರು. ಅವರು ತಮ್ಮ ಬರವಣಿಗೆಗೆ ಆಜಾದ್ ಎಂಬ ನಾಮಾಂಕಿತ ಬಳಸುತ್ತಿದ್ದರು.

1931ರಲ್ಲಿ ದರ್ಶನ ಸತ್ಯಾಗ್ರಹದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಅವರು ಕಠಿಣ ಸೆರೆವಾಸ ಅನುಭವಿಸಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಮಹಾತ್ಮ ಗಾಂಧಿಯ ನಿಕಟವರ್ತಿ ಕೂಡಾ ಆಗಿದ್ದರು. 1958ರ ಫೆಬ್ರುವರಿ 22ರಂದು ಆಜಾದ್ ವಿಧಿವಶರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next