Advertisement

ಇಂದು ವೈದ್ಯರ ದಿನ : ನಿಯಮಗಳನ್ನು ಪಾಲಿಸೋಣ ವೈದ್ಯರನ್ನು ಗೌರವಿಸೋಣ

03:23 AM Jul 01, 2020 | Hari Prasad |

ಇಂದು ರಾಷ್ಟ್ರೀಯ ವೈದ್ಯರ ದಿನ. ಕೋವಿಡ್ 19 ಸೋಂಕಿನ ಹಾವಳಿಯ ಈ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ್‌ಗಳಾಗಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ವಾದದ್ದು. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ವೈದ್ಯಲೋಕಕ್ಕೆ ನುಡಿನಮನವಿದು…

Advertisement

ಡಾ| ಬಿ. ಸಿ. ರಾಯ್‌ ಅವರ ಜನ್ಮದಿನವಾದ ಜುಲೈ 1ರಂದು ದೇಶದಲ್ಲಿ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ವೈದ್ಯರ ದಿನಾಚರಣೆಯ ವೇಳೆ ವೈದ್ಯರನ್ನು ಸಮ್ಮಾನಿಸುವ   ಮೂಲಕ ಅವರನ್ನು ಗೌರವಿಸಲಾಗುತ್ತದೆ.

ಆದರೆ ಈ ವರ್ಷದ ವೈದ್ಯರ ದಿನಾಚರಣೆ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್ 19 ವೈರಸ್‌ ಸೋಂಕಿನ ಸಂದರ್ಭದಲ್ಲಿಯೇ ಬಂದಿದೆ. ಈ ಮಾರಕ ಸೋಂಕನ್ನು ತಡೆಗಟ್ಟುವಲ್ಲಿ ಮತ್ತು ನಿಭಾಯಿಸುವಲ್ಲಿ ವೈದ್ಯರು ಹಾಗೂ ಎಲ್ಲ ವೈದ್ಯಕೀಯ ಸಿಬಂದಿಯ ಪಾತ್ರ ಮಹತ್ತರವಾದುದು.

ಇದರ ನಡುವೆಯೇ ಅಲ್ಲಲ್ಲಿ ಕೋವಿಡ್ 19 ಸೋಂಕು ಸೇನಾನಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ದುರದೃಷ್ಟಕರ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬಂದಿ ಮೇಲೆ ಹಲ್ಲೆ ನಡೆಯುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಹಲ್ಲೆಕೋರರ ವಿರುದ್ಧ ಕಠಿನ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಇಂಥ ಅಮಾನುಷ ಘಟನೆಗಳು ನಡೆದಿವೆಯದರೂ ಅಲ್ಲಲ್ಲಿ ವೈದ್ಯಕೀಯ ಸಿಬಂದಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆಗಳು ಪದೇಪದೆ ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ಕೋವಿಡ್‌-19 ಪೀಡಿತರ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುವ ನರ್ಸ್‌ ಹಾಗೂ ಇತರ ಸಿಬಂದಿಗೆ ಮಾನಸಿಕ ಕಿರುಕುಳವನ್ನು ನೀಡಲಾಗುತ್ತಿದೆ.

Advertisement

ಇಂತಹ ಒಂದು ಕ್ಲಿಷ್ಠಕರ ಸಮಯದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬಂದಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳ ಶುಶ್ರೂಷೆ ಮಾಡುತ್ತಿರುವಾಗ ಇಂತಹ ಸಣ್ಣಪುಟ್ಟ ಘಟನೆಗಳು ಕೂಡಾ ನಮ್ಮ ಮನಸ್ಸಿಗೆ ಬಹಳ ದುಃಖವನ್ನು ಉಂಟುಮಾಡುತ್ತವೆ.

ಮುಂದಿನ ದಿನಗಳಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಇದ್ದು ವೈದ್ಯಕೀಯ ಸಿಬಂದಿಯನ್ನು ಗೌರವದಿಂದ ನೋಡಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ.

ಇದೇ ವೇಳೆ ಸಮಾಜದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗೆ ಹಿಂದೆಂದೂ ಕಾಣದಂಥ ಬೆಂಬಲ ಮತ್ತು ಪ್ರೋತ್ಸಾಹ ಲಭಿಸುತ್ತಿದ್ದು ಇದು ಸಮಾಧಾನಕರ ಅಂಶ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗೆ ಬೆಂಬಲವನ್ನು ನೀಡುತ್ತಿರುವ ಎಲ್ಲರಿಗೂ ನಾವು ಚಿರ ಋಣಿಯಾಗಿರಲೇಬೇಕು.

ನಾವೇನು ಮಾಡಬಹುದು?
ನಾವೆಲ್ಲರೂ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕಿದೆ. ಕೋವಿಡ್ ರೋಗವನ್ನು ತಡೆಗಟ್ಟಲು ಹಲವಾರು ಮುನ್ನೆಚ್ಚರಿಕೆ ಕ್ರಮಗಳಿದ್ದು ಅವನ್ನು ಪಾಲಿಸಲೇಬೇಕಿದೆ. ಮುಖ್ಯವಾಗಿ  ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಭ್ರವಾಗಿ ಇಟ್ಟುಕೊಳ್ಳುವುದು ಮತ್ತು ಸಾಧ್ಯವಾದಷ್ಟು ಜನಜಂಗುಳಿಯಿಂದ ದೂರವಿರಬೇಕು. ನಮ್ಮ ಪ್ರೀತಿಪಾತ್ರರಿಗೆ ಮತ್ತು ಬೇರೆಯವರಿಗೂ ಇದನ್ನು ಮನದಟ್ಟು ಮಾಡಿಕೊಟ್ಟು ಇವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕಿವಿಮಾತು ಹೇಳಬೇಕು.

ನಮ್ಮ ಜಗತ್ತಿನಿಂದ ಈ ಕೋವಿಡ್ 19 ಸೋಂಕು ಆದಷ್ಟು ಬೇಗ ತೊಲಗಲಿ ಎಂದು ನಾವೆಲ್ಲರೂ ಆಶಿಸೋಣ. ಅಲ್ಲಿಯವರೆಗೂ ನಮ್ಮ ಮತ್ತು ಪ್ರೀತಿಪಾತ್ರರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ನಾವೆಲ್ಲರೂ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ  ವೈದ್ಯರು ಮತ್ತು ವೈದ್ಯಕೀಯ ಸಿಬಂದಿಗೆ ನಾವು ಕೊಡುವ ಬಲುದೊಡ್ಡ ಉಡುಗೊರೆ.


– ಡಾ| ಶಶಿಕಿರಣ್‌ ಉಮಾಕಾಂತ್‌, ನೋಡಲ್‌ ಅಧಿಕಾರಿ, ಕೋವಿಡ್‌ ಆಸ್ಪತ್ರೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next