Advertisement
ನನ್ನ 50 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ ಕೋವಿಡ್ 19ನಂತಹ ಮತ್ತೊಂದು ಸಾಂಕ್ರಾಮಿಕವನ್ನು ನಾನು ನೋಡಿರಲಿಲ್ಲ. ಏಡ್ಸ್ ಪಿಡುಗು ವ್ಯಾಪಕವಾಗುತ್ತಿದ್ದ ವೇಳೆಯಲ್ಲಿ ನಾನು ಅಮೆರಿಕದಲ್ಲಿದ್ದೆ, ಇದುವರೆಗೂ ನಾನು ಎಚ್1ಎನ್1, ಸಾರ್ಸ್, ಮರ್ಸ್ ಮತ್ತು ಸ್ಮಾಲ್‌ಪಾಕ್ಸ್ ರೋಗಿಗಳಿಗೂ ಚಿಕಿತ್ಸೆ ನೀಡಿದ್ದೇನೆ.
Related Articles
Advertisement
ಅಲ್ಲದೇ ಜನರ ಜತೆ ಬೆರೆಯುವುದು, ಶಾಪಿಂಗ್‌ಗೆ ಹೋಗುವುದು, ಆಚೆ ಡಿನ್ನರ್ ಮಾಡುವುದು ಅಥವಾ ಕುಟುಂಬದವರು, ಸ್ನೇಹಿತರ ಜತೆಗೆ ಸಿನೆಮಾ ನೋಡಿಕೊಂಡು ಬರುವುದು. ಈ ರೀತಿಯ ಜೀವನದ ಸರಳ ಸಂತೋಷಗಳನ್ನೂ ಈ ವೈರಸ್ ಜರ್ಜರಿತಗೊಳಿಸಿದೆ. ಅಗಲಿದವರಿಗೆ ನೇರ ನಮನ ಸಲ್ಲಿಸುವ ಬದಲು ಝೂಮ್ ಆ್ಯಪ್‌ನಲ್ಲೇ ಕೊನೆಯ ಬಾರಿ ವಿದಾಯ ಹೇಳುವಂತಾಗಿದೆ. ನಿಸ್ಸಂಶಯವಾಗಿಯೂ ಈ ಬಿಕ್ಕಟ್ಟು ನಾವು ನಮ್ಮ ಬದುಕನ್ನು ಪ್ಲ್ರಾನ್ ಮಾಡಿಕೊಳ್ಳುವ, ರೂಪಿಸಿಕೊಳ್ಳುವ ರೀತಿಯನ್ನೇ ಬದಲಿಸಿದೆ.
ರೋಗಿಗಳಿಗೆ ಆಗದಿರಲಿ ತೊಂದರೆ: ಕೋವಿಡ್-19 ವಿರುದ್ಧ ಹೋರಾಡಲು ಅಗಾಧ ಪ್ರಮಾಣದ ಸಿದ್ಧತೆ ಹಾಗೂ ಲಭ್ಯ ಸಂಪನ್ಮೂಲಗಳನ್ನೇ ಬಳಸಿಕೊಳ್ಳಲಾಗುತ್ತಿದ್ದು, ಇದೇ ವೇಳೆಯಲ್ಲೇ ಕೊರೊ ನೇತರ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೇವೆಗಳು ಸಿಗುವುದಕ್ಕೆ ಕಷ್ಟವಾಗಿದೆ. ಹೀಗೆ ತೊಂದರೆ ಅನುಭವಿಸುತ್ತಿರುವವರಲ್ಲಿ ಸಾಂಕ್ರಾಮಿಕವಲ್ಲದ ರೋಗಿಗಳೂ ಇದ್ದಾರೆ.
ಇವರಿಗೆಲ್ಲ ದೀರ್ಘಾವಧಿ ಆರೋಗ್ಯ ಸೇವೆ ಅತ್ಯಗತ್ಯವಿರುತ್ತದೆ. ಇದಷ್ಟೇ ಅಲ್ಲದೇ ವೈರಸ್‌ಗಳಿಂದಾಗಿ ಉಸಿರಾಟದ ಕಾಯಿಲೆ ಎದುರಿಸುತ್ತಿರುವವರು, ಸೊಳ್ಳೆಗಳಿಂದ ಹರಡುವ ವೈರಸ್‌ಗಳಿಗೆ ತುತ್ತಾಗಿರುವವರು ಆಹಾರ ಜನ್ಯ ರೋಗಗಳಿಂದ ಬಳಲುತ್ತಿರುವವರ ಮೇಲೂ ಅಪಾರ ಒತ್ತಡ ಬಿದ್ದಿದೆ.
ಈ ವಿಷಯದಲ್ಲಿ ಕೂಡಲೇ ಗಮನಹರಿಸುವ ಅಗತ್ಯ ಏಕೆ ಇದೆಯೆಂದರೆ, ಈ ರೀತಿಯ ರೋಗಗಳು ಮೇ ಮತ್ತು ನವೆಂಬರ್ ತಿಂಗಳ ಮಧ್ಯದಲ್ಲಿ ಹೆಚ್ಚಳವಾಗಿಬಿಡುತ್ತವೆ. ಈ ವರ್ಷವಂತೂ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಮ್ಮ ಸಂಪನ್ಮೂಲಗಳ ಮೇಲೆ ಬಹಳ ಒತ್ತಡ ಬಿದ್ದಿದೆ ಈ ಕಾರಣಕ್ಕಾಗಿಯೇ ಕೋವಿಡೇತರ ರೋಗಿಗಳ ಅಗತ್ಯಗಳನ್ನು ತಲುಪುವುದಕ್ಕೆ ಸೂಕ್ತ ತಯಾರಿ ನಡೆಸುವ ನಿಟ್ಟಿನಲ್ಲಿ ನಾವು ಹೆಚ್ಚು ಜಾಗೃತವಾಗಿ ಇರಬೇಕು.
ಯಾವಾಗ ಖಾಸಗಿ ಮತ್ತು ಸರಕಾರಿ ವಲಯಗಳೂ ಕೋವಿಡೇತರ ಆರೋಗ್ಯ ಸೇವೆಯತ್ತ ಗಮನಹರಿಸುತ್ತವೋ ಆಗ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ. ಇದನ್ನೆಲ್ಲ ಸಾಧಿಸುವುದಕ್ಕೆ ಸಾರ್ವಜನಿಕ ಜಾಗೃತಿಯೇ ಕೀಲಿಕೈ. ಕೋವಿಡ್ 19 ಕುರಿತು ಜಾಗೃತಿ ಮತ್ತು ಉಪಕ್ರಮಗಳನ್ನು ಹೆಚ್ಚಿಸುವುದರ ಜತೆಜತೆಗೇ, ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಅನಗತ್ಯ ಭೀತಿ, ಭ್ರಮಣ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಇವರೆಲ್ಲರೂ ವರ್ಚುವಲ್ ಆಗಿ ಅಥವಾ ನೇರವಾಗಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮುಂದಾಗುವುದಕ್ಕೆ ಹಾಗೂ ಕೊರೊನೇತರ ರೋಗಗಳನ್ನು ಕಡೆಗಣಿಸದಿರುವಂತೆ ಖಾತ್ರಿಪಡಿಸಬೇಕು.
ಇನ್ನು ಸಾರ್ವಜನಿಕರಲ್ಲಿ ಭಯ ದೂರವಾಗುವಂತೆ, ತನ್ಮೂಲಕ ಅವರೆಲ್ಲ ಅಗತ್ಯ ವೈದ್ಯಕೀಯ ಸೇವೆಗಳನ್ನು ಪಡೆಯುವಂತೆ ಮಾಡಲು ಸರಕಾರ ಮತ್ತು ಖಾಸಗಿ ವಲಯ ಜತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಈ ಕೆಲಸವನ್ನು ಈಗಾಗಲೇ ಟೆಲಿ-ಕನ್ಸಲ್ಟ್ ಗಳು ಸಾಮಾಜಿಕ ಅಂತರ ಪರಿಪಾಲನೆಯಲ್ಲಿ ವಿಶೇಷ ಮುನ್ನೆಚ್ಚರಿಕೆಗಳು ನಿರಂತರ ಸ್ಕ್ರೀನಿಂಗ್ ಹಾಗೂ ಆರೋಗ್ಯ ವಲಯದ ಸಿಬ್ಬಂದಿಗೆ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಪಿಪಿಪಿ ಭದ್ರತೆ ಒದಗಿಸುವ ಮೂಲಕ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮಲ್ಲೇ ಅನೇಕರೂ ಸಹ, ಜನರು ಆಸ್ಪತ್ರೆಗೆ ಸಂದರ್ಶಿಸುವಂಥ ವಾತಾವರಣ ನಿರ್ಮಾಣ ಮಾಡಲು, ಜನರಲ್ಲಿ ಭರವಸೆ ತುಂಬುವಂಥ ಕ್ರಮಗಳನ್ನು ಪಾಲಿಸುತ್ತಿದ್ದೇವೆ.
ಭರವಸೆ ಕಳೆದುಕೊಳ್ಳದಿರಿ: ಭರವಸೆಯ ಕಿರಣವೇನೆಂದರೆ, ಭಾರತವು ಒಂದು ದೇಶವಾಗಿ ಬಹುಬೇಗನೇ ಪುಟಿದೇಳುವ ರಾಷ್ಟ್ರ. ನಾವು ಈ ಹಿಂದೆಯೂ ಅನೇಕ ಬಾರಿ ಜತೆಯಾಗಿ ಹೋರಾಡಿದ್ದೇವೆ, ಅನೇಕ ಯುದ್ಧಗಳನ್ನು ಗೆದ್ದಿದ್ದೇವೆ. ಬರ, ಪ್ರವಾಹಗಳು, ಸಾರ್ಸ್, ಎಚ್1ಎನ್1, ಪ್ಲೇಗ್‌ನಂಥ ಸಾಂಕ್ರಾಮಿಕಗಳ ವಿರುದ್ಧ ಗೆಲುವು ಸಾಧಿಸಿದ್ದೇವೆ. ಪೊಲಿಯೋ, ಸಿಡುಬಿನಂಥ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ.
ಶಾಂತವಾಗಿದ್ದುಕೊಂಡು, ದೃಢತೆಯಿಂದ ಮುನ್ನಡೆಯುವ ಚೇತನ ನಮಗಿದೆ. ಎಲ್ಲರಿಗೂ ನನ್ನ ಸಂದೇಶವಿದು- ಭರವಸೆ ಕಳೆದುಕೊಳ್ಳಬೇಡಿ, ಬದಲಾವಣೆಗೆ ತಕ್ಕಂತೆ ಹೆಜ್ಜೆಹಾಕಿ, ಅಗತ್ಯ ಎದುರಾದಾಗ ಸಹಾಯ ಪಡೆಯಿರಿ. ಯಾವ ಸಮಸ್ಯೆಯೂ ಶಾಶ್ವತವಲ್ಲ. ಅಲ್ಲದೇ ಕತ್ತಲು ಸರಿದು ಬೆಳಕು ಮೂಡಲೇಬೇಕು.
ಈ ಸಾಂಕ್ರಾಮಿಕವೂ ಹೊರಟುಹೋಗುತ್ತದೆ. ಇದು ನಿಜಕ್ಕೂ ಕಷ್ಟಕರ ಸಮಯವೆನ್ನುವುದು ನಿಜ. ಆದರೆ, ನಾವೆಲ್ಲರೂ ಜತೆಗೂಡಿ ಹೋರಾಡಿದರೆ, ಈ ಯುದ್ಧದಲ್ಲಿ ಗೆಲ್ಲಬಲ್ಲೆವು ಮತ್ತು ಮುಂದಿನ ಕೆಲವು ತಿಂಗಳಲ್ಲಿ ಹೊಸ ಸಾಧಾರಣತೆಯನ್ನು ತಲುಪಬಲ್ಲೆವು ಎನ್ನುವ ನಂಬಿಕೆ ನನಗಿದೆ.
ಕೋವಿಡ್ 19ನ ಕಾರ್ಮೋಡ ಬಹಳ ಕಷ್ಟಗಳನ್ನು ತರುತ್ತಿದೆಯಾದರೂ, ಇದೇ ವೇಳೆಯಲ್ಲೇ ಇದು ಅನಿಶ್ಚಿತ ಸಮಯದಲ್ಲೂ ದೃಢತೆಯಿಂದ ಬದುಕುವ ಮತ್ತು ಅಪರಿಚಿತವಾದದ್ದನ್ನು ಎದುರಿಸುವ ಪಾಠವನ್ನು ನಮಗೆ ಕಲಿಸುವ ಭರವಸೆಯ ಬೆಳಕನ್ನೂ ಮೂಡಿಸುತ್ತಿದೆ.– ಡಾ| ಎಚ್.ಸುದರ್ಶನ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ ಆಸ್ಪತ್ರೆಗಳು