ಉಳ್ಳಾಲ: ರಾಷ್ಟ್ರೀಯ ವಿಪತ್ತು ರಕ್ಷಣ ನಿಧಿಯನ್ನು ಪ್ರಕೃತಿ ವಿಕೋಪದಿಂದ ಹಾನಿಯಾದ ಸ್ಥಳಗಳಿಗೆ ಸರಿಯಾಗಿ ವಿನಿಯೋಗಿಸದೆ, ಸ್ಥಳೀಯ ಶಾಸಕರಿಗೆ ಪ್ರಾಕೃತಿಕ ವಿಕೋಪದ ಸಂದರ್ಭ ನಿರ್ವಹಣೆಗೆ ಅನುದಾನ ನೀಡದೆ ಸಂತ್ರಸ್ತರನ್ನು ನಿರ್ಗತಿಕ ರನ್ನಾಗಿಸುವ ಕಾರ್ಯ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.
ಕಡಲ್ಕೊರೆತದಿಂದ ಹಾನಿಗೀಡಾಗಿರುವ ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಸ್ಥಳೀಯ ಮೀನುಗಾರರ ರಕ್ಷಣೆ ಯೊಂದಿಗೆ ಸಂತ್ರಸ್ತರಿಗೆ ಪರಿಹಾರ ನೀಡು ವಂತೆ ಆಗ್ರಹಿಸುತ್ತೇನೆ ಮತ್ತು ತಾಂತ್ರಿಕ ತಜ್ಞರ ಜತೆ ಚರ್ಚಿಸಿ ತುರ್ತು ಪರಿಹಾರದ ಕುರಿತು ಚಿಂತಿಸಲಾಗುವುದು ಎಂದರು.
ಸ್ಥಳೀಯರು ಮೊಯ್ಲಿ ಅವರಲ್ಲಿ ಮನವಿ ನೀಡಿ ಮಾತನಾಡಿ, ತುರ್ತಾಗಿ ಯಾವುದೇ ಪರಿಹಾರವನ್ನು ನೀಡದ ಫಲವಾಗಿ ಉಚ್ಚಿಲದ ಮೀನುಗಾರರು ಊರು ಬಿಡುವಂತಾಗಿದೆ. 20 ಮನೆಗಳ ಮಂದಿ ನಾಡದೋಣಿ ಮೂಲಕ ಮೀನುಗಾರಿಕೆ ನಡೆಸುವವರಿದ್ದಾರೆ. ಅವರನ್ನೇ ಓಡಿಸುವ ಕೆಲಸವಾಗುತ್ತಿದೆ. ಮನೆ ದುರಸ್ತಿಗೆ ಮುಂದಾಗುವಾಗ ನೋಟಿಸ್ ನೀಡಲಾ ಗುತ್ತಿದೆ. ಆದರೆ ರೆಸಾರ್ಟ್‌ನವರು ಒಂದು ಮಹಡಿ ನಿರ್ಮಿಸಿದರೂ ಕೇಳುವವರಿಲ್ಲ. ಸಿಆರ್‌ಝಡ್‌ನಲ್ಲಿ ಬೋವಿ ಜನಾಂಗ ದವರು ಮೀನುಗಾರರೆಂದು, ಅವರಿಗೆ ರಕ್ಷಣೆ ನೀಡಬೇಕೆಂಬ ಕಾನೂನಿದ್ದರೂ ದೌರ್ಜನ್ಯ ಮಾಡಲಾಗುತ್ತಿದೆ ಎಂದರು.
ಶಾಸಕ ಯು.ಟಿ. ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಮೊದ ಲಾದವರಿದ್ದರು.
ಬಂಟ್ವಾಳಕ್ಕೆ ಭೇಟಿ
ಬಂಟ್ವಾಳ: ಪಂಜಿಕಲ್ಲಿನ ಮುಕ್ಕುಡದಲ್ಲಿ ಗುಡ್ಡ ಕುಸಿತದಿಂದ ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ ಡಾ| ಮೊಯ್ಲಿ ಅವರು ಸ್ಥಳೀಯ ಮನೆಯವರೊಂದಿಗೆ ಮಾತುಕತೆ ನಡೆಸಿದರು. ಬಿ. ರಮಾನಾಥ ರೈ ಜತೆಗಿದ್ದರು.