Advertisement

ರಾಷ್ಟ್ರಾಭಿವೃದ್ಧಿ, ಸಾಮಾಜಿಕ ಬದಲಾವಣೆ: ಐಎಎಸ್‌ ಪಾತ್ರ ಮಹತ್ತರ

03:17 PM Aug 01, 2017 | Team Udayavani |

ಉಡುಪಿ: ರಾಷ್ಟ್ರದ ಸಮಗ್ರ ಅಭಿವೃದ್ಧಿ, ಸಾಮಾಜಿಕ ಬದಲಾವಣೆಯಲ್ಲಿ ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌) ಮಹತ್ತರ ಪಾತ್ರವನ್ನು ವಹಿಸಿಕೊಂಡಿದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 112ನೇ ರ್‍ಯಾಂಕ್‌ ಪಡೆದ ಮಣಿಪಾಲದ ರಂಜನ್‌ ಆರ್‌. ಶೆಣೈ ಅವರು ಹೇಳಿದರು.

Advertisement

ಎಂಜಿಎಂ ಕಾಲೇಜಿನ ಆರ್ಟ್ಸ್ ಮತ್ತು ಐಕ್ಯೂಎಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಜು. 31ರಂದು ನೂತನ ರವೀಂದ್ರ ಮಂಟಪದಲ್ಲಿ ನಡೆದ ಐಎಎಸ್‌
ಪರೀಕ್ಷಾ ಸಾಧಕರ ಜೊತೆಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಜನೆಯಿಂದ ಜ್ಞಾನ, ಕೌಶಲ ವೃದ್ಧಿಯಾಗುತ್ತದೆ. ಭವಿಷ್ಯಕ್ಕಾಗಿ ಸೂಕ್ತವಾದ ದಾರಿಯಲ್ಲಿ ಮುನ್ನಡೆ ಯಬೇಕು. ನಾನು ಕೂಡ 2 ವರ್ಷ ಮುಂಬಯಿಯ ಸ್ಲಂ ನಿವಾಸಿಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಮಾನವೀಯ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು. ಪರಿಸರದ ಸ್ವತ್ಛತೆಗೆ ಆದ್ಯತೆ ಕೊಡಬೇಕು ಎಂದರು.

ಕಲಾ ವಿದ್ಯಾರ್ಥಿಗಳಿಗೆ ಐಎಎಸ್‌ ಸುಲಭ 
ಐಎಎಸ್‌ ಪರೀಕ್ಷೆ ಬರೆಯಲು ಎಂಜಿನಿಯರಿಂಗ್‌, ಡಾಕ್ಟರ್‌ ಪದವಿ ಪಡೆಯಬೇಕಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಸುಲಭವಿದೆ. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ ಗಳೇ ಪ್ರಶ್ನೆಗಳಾಗಿ ಇಲ್ಲಿ ಹೆಚ್ಚಾಗಿ ಬರುತ್ತದೆ. ಹಾಗಾಗಿ ಆರ್ಟ್ಸ್ ಕಲಿತವರು ಐಎಎಸ್‌ ಪರೀಕ್ಷೆಗೆ ಒತ್ತು ಕೊಡಬಹುದು. ಇಂದಿನ ಆಗು-ಹೋಗುಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವಿರಬೇಕು. ಅದಕ್ಕಾಗಿ ಪತ್ರಿಕೆಗಳನ್ನು ಹೆಚ್ಚು ಓದಬೇಕು ಎಂದರು.

ಆನ್‌ಲೈನ್‌ ತರಬೇತಿ ಉತ್ತಮ
ಐಎಎಸ್‌ ಪರೀಕ್ಷೆ ಬರೆಯಲು ಪರಿಣತಿ ಹೊಂದಿದ ಶಿಕ್ಷಕರೇ ಬೋಧನೆ ಮಾಡಿದಂತಹ ಕ್ಲಾಸ್‌ ಟೀಚಿಂಗ್‌ನ ವೀಡಿಯೋ ಆನ್‌ಲೈನ್‌ನಲ್ಲಿ ಲಭ್ಯವಿದೆ. ನುರಿತ ಶಿಕ್ಷಕ ರಿಂದ ಸಲಹೆ ಪಡೆದುಕೊಂಡು ಆನ್‌ಲೈನಿನಿಂದ ಬೋಧನೆಯ ವೀಡಿಯೋ ಪಡೆದುಕೊಂಡು ಮನೆಯಲ್ಲಿಯೇ ಕುಳಿತುಕೊಂಡು ಐಎಎಸ್‌ ತರಬೇತಿ ಪಡೆಯಬಹುದು ಎಂದು ರಂಜನ್‌ ಹೇಳಿದರು.

ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್‌ ಸೈನ್ಸ್‌ ಮುಖ್ಯಸ್ಥ ಪ್ರೊ| ಎಂ. ವಿಶ್ವನಾಥ ಪೈ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ ಪರಿಚಯಿಸಿದರು. ದ್ವಿತೀಯ ಬಿಎ ವಿದ್ಯಾರ್ಥಿ ಜೆಸ್ಟಿನ್‌ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದಿವ್ಯಾ ಶೆಟ್ಟಿ ವಂದಿಸಿದರು.

Advertisement

ಹುಡುಗಿಯರಿಗೆ ಪರೀಕ್ಷೆ ಶುಲ್ಕವಿಲ್ಲ
ದೇಶದಲ್ಲಿ 23 ವಿವಿಧ ಸರಕಾರಿ ಸೇವಾ ಕ್ಷೇತ್ರಗಳಿದೆ. ಕೊಂಕಣಿ, ಕನ್ನಡ ಸಹಿತ ಸಂವಿಧಾನದಲ್ಲಿ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಐಎಎಸ್‌ ಪರೀಕ್ಷೆ ಬರೆಯಬಹುದು. ದಿಲ್ಲಿಯಲ್ಲಿಯೇ ಪರೀಕ್ಷೆ ಬರೆಯಬೇಕು ಎಂದೇನಿಲ್ಲ. ಕರ್ನಾಟಕದಲ್ಲಿಯೂ ಹಲವು ಯುಪಿಎಸ್ಸಿ ಪರೀಕ್ಷಾ ಕೇಂದ್ರಗಳಿದೆ. ಸ್ವಲ್ಪ ಹಣ ಖರ್ಚು ಮಾಡಿ ಕೋಚಿಂಗ್‌ ಪಡೆಯಬಹುದು. ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡಬಹುದು. ಐಎಎಸ್‌ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರಿಗೆ ಉಚಿತ ಶುಲ್ಕ. ಹುಡುಗರಿಗೆ 100 ರೂ. ಶುಲ್ಕ ಮಾತ್ರ ಇದೆ ಎಂದರು.

ಫೇಸ್‌ಬುಕ್‌ ಅಕೌಂಟ್‌  ಡಿಲೀಟ್‌ ಮಾಡಿ
ವಿದ್ಯಾರ್ಥಿಗಳಲ್ಲಿ ಫೇಸ್‌ಬುಕ್‌ ಅಕೌಂಟ್‌ ಇದ್ದರೆ ಮೊದಲು ಅದನ್ನು ಡಿಲೀಟ್‌ ಮಾಡಿ. ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಳ್ಳುವುದರಿಂದ ಸಮಯ ವ್ಯರ್ಥವಾಗುತ್ತದೆ. ಆ ಸಮಯವನ್ನು ಓದಿನಲ್ಲಿ ತೊಡಗಿಸಿಕೊಳ್ಳಿ. ಶೈಕ್ಷಣಿಕ ಗುರಿ ತಲುಪಿದ ಬಳಿಕ ಬೇಕಿದ್ದರೆ ಫೇಸ್‌ ಬುಕ್‌ ಅಕೌಂಟ್‌ ತೆರೆಯಿರಿ ಎಂದು ರಂಜನ್‌ ಶೆಣೈ ವಿದ್ಯಾರ್ಥಿಗಳಿಗೆ ಸಲಹೆ ಇತ್ತರು.

Advertisement

Udayavani is now on Telegram. Click here to join our channel and stay updated with the latest news.

Next