Advertisement

ರಾಷ್ಟ್ರೀಯ ಸೈಕ್ಲಿಂಗ್‌ ಕೂಟದಲ್ಲಿ ಸೈಕ್ಲಿಸ್ಟ್‌ಗಳ ಪರದಾಟ

12:55 AM Jan 31, 2019 | |

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಬುಧವಾರದಿಂದ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಆರಂಭವಾಗಿದೆ. ಇದರಲ್ಲಿ ಭಾಗವಹಿಸುತ್ತಿರುವ ಸೈಕ್ಲಿಸ್ಟ್‌ಗಳ ಸಂಕಷ್ಟವನ್ನು ಮಾತ್ರ ದೇವರೇ ಸರಿಪಡಿಸಬೇಕು! ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿನ ವೆಲೊಡ್ರೋಮ್‌ (ಸೈಕ್ಲಿಂಗ್‌ ಅಂಕಣ) ಬಳಿ ರಾಜಸ್ಥಾನ ಸೈಕ್ಲಿಸ್ಟ್‌ಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಒಂದು ಚಿಕ್ಕ ಹಾಲ್‌ನಲ್ಲಿ 30 ಸ್ಪರ್ಧಿಗಳು ತಂಗಿದ್ದಾರೆ. ಅವರಿಗೆಲ್ಲ ಹಾಸಿಕೊಳ್ಳಲು ಸರಿಯಾದ ಹಾಸಿಗೆಗಳಿಲ್ಲ. ನೀಡಿರುವ ಹಾಸಿಗೆಗಳಿಗೆ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶವನ್ನು ತಡೆಯುವ ಶಕ್ತಿಯಿಲ್ಲ…ಹೀಗೆಂದು ಆಂಗ್ಲ ದಿನಪತ್ರಿಕೆ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

Advertisement

ಅಚ್ಚರಿಯೆಂದರೆ ಮಾಡಿರುವ ವಸತಿ ವ್ಯವಸ್ಥೆಯಲ್ಲೂ ತಾರತಮ್ಯವಿದೆ. ಬೇರೆ ಬೇರೆ ತಂಡಗಳಲ್ಲಿರುವ ಅಂತಾರಾಷ್ಟ್ರೀಯ ಸೈಕ್ಲಿಸ್ಟ್‌ಗಳಿಗೆ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಮಹಾರಾಷ್ಟ್ರ ತಂಡದಲ್ಲಿ ಮಯೂರ್‌ ಪವಾರ್‌, ಅಭಿಷೇಕ್‌ ಖಾಸಿತ್‌ ಎಂಬ ಅಂತಾರಾಷ್ಟ್ರೀಯ ಚಿನ್ನ ಗೆದ್ದಿರುವ ಇಬ್ಬರು ಸೈಕ್ಲಿಸ್ಟ್‌ಗಳಿದ್ದಾರೆ. ಅವರಿಗೆ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ 22 ಮಂದಿಯಿರುವ ಅವರ ತಂಡದ ಇತರೆ ಸದಸ್ಯರಿಗೆ, ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿರುವ ಪುಟ್ಟ ಹಾಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಹಲವು ಅಂತಾರಾಷ್ಟ್ರೀಯ ತಾರೆಯರೇ ಇರುವ, ರೈಲ್ವೇಸ್‌, ಸರ್ವಿಸಸ್‌ನಂತಹ ತಂಡಗಳು ತಮ್ಮ ವಸತಿ ವ್ಯವಸ್ಥೆಯನ್ನು ತಾವೇ ಮಾಡಿಕೊಂಡಿವೆ. ಸೂಕ್ತ ವಸತಿ ವ್ಯವಸ್ಥೆಯಿಲ್ಲದ ಸ್ಪರ್ಧಿಗಳು ತಮ್ಮ ಭವಿಷ್ಯದ ಬಗೆಗಿನ ಭೀತಿಯಿಂದ ಆಕ್ಷೇಪ ಎತ್ತಲು ಹಿಂಜರಿಯುತ್ತಿದ್ದಾರೆ.

ಈ ಬಗ್ಗೆ ರಾಜಸ್ಥಾನ ಸೈಕ್ಲಿಂಗ್‌ ಸಂಸ್ಥೆಯನ್ನು ಪ್ರಶ್ನಿಸಿದರೆ, ಅದರ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಮಗಿರುವ 75 ಲಕ್ಷ ರೂ. ಹಣದಲ್ಲೇ ಎಲ್ಲವನ್ನೂ ನಡೆಸಬೇಕು. ಇದರಲ್ಲಿ ಹಲವಾರು ವರ್ಷಗಳಿಂದ ಬಳಸದೇ ಹಾಗೇ ಉಳಿದುಕೊಂಡಿರುವ ವೆಲೊಡ್ರೋಮನ್ನೂ ನವೀಕರಣ ಮಾಡಬೇಕು ಎಂದು ತಮ್ಮ ಪರಿಸ್ಥಿತಿ ಹೇಳಿಕೊಳ್ಳುತ್ತಾರೆ.

ಸೈಕಲ್‌ ಬಿಟ್ಟಿರಲು ಸಿದ್ಧವಿಲ್ಲ: ಇದೇ ವೇಳೆ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ಸೈಕ್ಲಿಸ್ಟ್‌ಗಳು ಹೋಟೆಲ್‌ಗ‌ಳಲ್ಲಿ ಉಳಿದುಕೊಳ್ಳಲು ಒಪ್ಪುವುದಿಲ್ಲವಂತೆ. ಹೋಟೆಲ್‌ಗ‌ಳು ಸೈಕಲ್‌ ಒಳತರಲು ಅವಕಾಶ ನೀಡುವುದಿಲ್ಲ. ಆದರೆ ಸೈಕ್ಲಿಸ್ಟ್‌ಗಳು ಒಂದು ನಿಮಿಷವೂ ಸೈಕಲ್‌ ಬಿಟ್ಟು ಇರಲು ಸಿದ್ಧರಿಲ್ಲ. ಹೀಗಿದ್ದರೆ ವ್ಯವಸ್ಥೆ ಮಾಡುವುದು ಹೇಗೆ? ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ. ಕೇಂದ್ರ ಕ್ರೀಡಾಮಂತ್ರಿ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌, ಕ್ರೀಡಾಪಟುಗಳೇ ನಮ್ಮ ಕೇಂದ್ರವಾಗಬೇಕು ಎಂದು ಆಶಿಸಿದ್ದಾರೆ. ಆದರೆ ಸದ್ಯದ ಸ್ಥಿತಿಯಲ್ಲಿ ಅಂತಹ ಪರಿಸ್ಥಿತಿಯಿಲ್ಲ ಎನ್ನುವುದು ಖೇದಕರ ಎಂದು ಕ್ರೀಡಾಭಿಮಾನಿಗಳು ಬೇಸರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next