Advertisement

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಾಟ್ ರೀಚೆಬಲ್ ಆದ ಎನ್.ಸಿ.ಪಿ. ನಾಯಕ ಅಜಿತ್ ಪವಾರ್

08:07 AM Sep 28, 2019 | Hari Prasad |

ಮುಂಬಯಿ: ನ್ಯಾಷನಲ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಹಾರಾಷ್ಟ್ರದ ಮಾಜೀ ಉಪಮುಖ್ಯಮಂತ್ರಿ ಹಾಗೂ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ಅವರು ಇಂದು ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ಅಜಿತ್ ಪವಾರ್ ಅವರು ಪಕ್ಷದ ನಾಯಕರೂ ಸೇರಿದಂತೆ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

Advertisement

ಅಜಿತ್ ಪವಾರ್ ಅವರು ರಾಜೀನಾಮೆ ಸಲ್ಲಿಸಿರುವ ವಿಚಾರವನ್ನು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಹರಿಬಾಬು ಬಗಾಡೆ ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಅಜಿತ್ ಅವರು ತಮ್ಮ ಕೈ ಬರಹದಲ್ಲಿದ್ದ ರಾಜೀನಾಮೆ ಪತ್ರವನ್ನು ಸ್ಪೀಕರ್ ಅವರ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದಾರೆ ಮತ್ತು ಈ ಕುರಿತಾಗಿ ಸ್ಪೀಕರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಎಂಬ ವಿಚಾರವನ್ನು ಬಗಾಡೆ ಅವರು ಖಚಿತಪಡಿಸಿದ್ದಾರೆ. ಆದರೆ ತಮ್ಮ ರಾಜೀನಾಮೆಗೆ ಯಾವುದೇ ಕಾರಣವನ್ನು ಅಜಿತ್ ಪವಾರ್ ಅವರು ಸ್ಪೀಕರ್ ಅವರಿಗಾಗಲೀ ಅಥವಾ ತಮ್ಮ ಪಕ್ಷದ ಮುಖಂಡರಿಗಾಗಲೀ ತಿಳಿಸಿಲ್ಲ.

ಅಜಿತ್ ಪವಾರ್ ಅವರು ಬಾರಾಮತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಜಿತ್ ಪವಾರ್ ಅವರ ರಾಜಿನಾಮೆ ಕುರಿತಾಗಿ ತಮಗೂ ಯಾವುದೇ ಮಾಹಿತಿ ಇಲ್ಲ ಎಂದು ಎನ್.ಸಿ.ಪಿ. ನಾಯಕರು ತಿಳಿಸಿದ್ದಾರೆ. ಹಾಗೂ ರಾಜೀನಾಮೆ ನೀಡಿದ ಬಳಿಕ ಅಜಿತ್ ಪವಾರ್ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಜಾರಿ ನಿರ್ದೇಶನಾಲಯವು ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಪಿ. ಮುಖಂಡ ಶರದ್ ಪವಾರ್ ಅವರ ಮೆಲೆ ಪ್ರಕರಣ ದಾಖಲಿಸಿಕೊಂಡಿತ್ತು ಮತ್ತು ಇದಕ್ಕೆ ಸಂಬಂಧಿಸಿದಂತೆ ಶರದ್ ಪವಾರ್ ಅವರು ಜಾರಿ ನಿರ್ದೇಶನಾಲಯ ಕಛೇರಿಗೆ ತೆರಳಿ ಮಾಹಿತಿ ನೀಡಲು ಯೋಚಿಸಿದ್ದರು. ಈ ಹಗರಣದಲ್ಲಿ ಅಜಿತ್ ಪವಾರ್ ಅವರ ಹೆಸರೂ ಸಹ ತಳಕುಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next