ಮುಂಬಯಿ: ಕಳೆದ ವರ್ಷ 75 ರೂಪಾಯಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಿ ʼರಾಷ್ಟ್ರೀಯ ಸಿನಿಮಾ ದಿನʼವನ್ನು ವಿಭಿನ್ನವಾಗಿ ಆಚರಿಸಿದ್ದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ವರ್ಷ ಮತ್ತೆ ಅದೇ ಯೋಜನೆಯನ್ನು ಮುಂದುವೆರಸಲು ನಿರ್ಧರಿಸಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಗುರುವಾರ(ಸೆ.21 ರಂದು) ಈ ಬಗ್ಗೆ ಟ್ವೀಟ್ ಮಾಡಿದ್ದು, ಅಕ್ಟೋಬರ್ 13, 2023 ರಂದು ಆಚರಿಸಲಾಗುವ ʼರಾಷ್ಟ್ರೀಯ ಸಿನಿಮಾ ದಿನʼದಂದು ಕೇವಲ 99 ರೂಪಾಯಿಗೆ ಟಿಕೆಟ್ ಪಡೆದು ಸಿನಿಮಾಗಳನ್ನು ವೀಕ್ಷಿಸಿ ಎಂದು ಹೇಳಿದೆ.
ಈ ದಿನ ಭಾರತದಾದ್ಯಂತ ಪ್ರಮುಖ ಸಿನಿಮಾ ಚೈನ್ಸ್ ಮತ್ತು ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್‌ಗಳ ಬೆಲೆ 99 ರೂಪಾಯಿ ಇರಲಿದೆ. 4000 ಕ್ಕೂ ಹೆಚ್ಚಿನ ಸಿನಿಮಾ ಸ್ಕ್ರೀನ್ ಗಳಲ್ಲಿ 99 ರೂಪಾಯಿಗೆ ಟಿಕೆಟ್ ಮಾರಾಟವಾಗಲಿದೆ.
ಪಿವಿಆರ್ ಐನಾಕ್ಸ್, ಸಿನೆಪೋಲಿಸ್, ಮಿರಾಜ್, ಸಿಟಿಪ್ರೈಡ್, ಏಷ್ಯನ್, ಮುಕ್ತಾ ಅಝ್,ವೇವ್, ಎಂ2ಕೆ,ಡಿಲೈಟ್ ಸೇರಿದಂತೆ ಅನೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ʼರಾಷ್ಟ್ರೀಯ ಸಿನಿಮಾʼ ದಿನದಂದು 99 ರೂಪಾಯಿಗೆ ಟಿಕೆಟ್ ಸೇಲ್ ಮಾಡಲಾಗುತ್ತದೆ. ಇದರೊಂದಿಗೆ ಕೆಲ ಹೆಚ್ಚುವರಿ ಆಫರ್ ಗಳು ಇರಬಹುದು. ಅದನ್ನು ಆಯಾ ಮಲ್ಟಿಪ್ಲೆಕ್ಸ್ ಗಳು ಅವರ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಬಹುದೆಂದು ಹೇಳಿದೆ.
ಕಳೆದ ವರ್ಷ ರಾಷ್ಟ್ರೀಯ ಸಿನಿಮಾ ದಿನಕ್ಕೆ 65 ಲಕ್ಷ ಟಿಕೆಟ್ ಗಳು ಮಾರಾಟವಾಗಿತ್ತು. ನೂರಾರು ಥಿಯೇಟರ್ ಗಳು ಮೊದಲ ಬಾರಿ ಹೌಸ್ ಫುಲ್ ಆಗಿದ್ದರ ಬಗ್ಗೆ ವರದಿ ಆಗಿದ್ದವು. ಅದೇ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ಈ ಪ್ರಯೋಗವನ್ನು ಮಾಡಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮುಂದಾಗಿದೆ.
ಯಾವೆಲ್ಲಾ ಸಿನಿಮಾಗಳಿಗೆ ಲಾಭವಾಗಬಹುದು..? ಅಕ್ಟೋಬರ್ 13 ರಂದು ಹಿಂದಿ, ತೆಲುಗು, ತಮಿಳು ಸೇರಿದಂತೆ ಇತರ ಸಿನಿಮಾರಂಗದಲ್ಲಿ ಯಾವುದೇ ಪ್ರಮುಖವಾದ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಆದರೆ ಅದರ ಹಿಂದಿನ ಕೆಲ ವಾರಗಳಲ್ಲಿ ದೊಡ್ಡ ಸಿನಿಮಾಗಳು ತೆರೆ ಕಾಣಲಿದೆ. ಮುಖ್ಯವಾಗಿ ವಿವೇಕ್ ಅಗ್ನಿಹೋತ್ರಿ ಅವರ ʼದಿ ವ್ಯಾಕ್ಸಿನ್ ವಾರ್ʼ, (ಸೆ.28 ರಂದು ತೆರೆಗೆ),ʼ ಫುಕ್ರೆ 3ʼ (ಸೆ.28 ರಂದು ತೆರೆಗೆ), ಅಕ್ಷಯ್ ಕುಮಾರ್ ಅವರ ʼ ಮಿಷನ್ ರಾಣಿಗಂಜ್ʼ(ಅ.6 ರಂದು ತೆರೆಗೆ), ಮುತ್ತಯ್ಯ ಮುರಳೀಧರನ್ ಅವರ ಜೀವನಚರಿತ್ರೆ “800” ಸಿನಿಮಾ ಕೂಡ ಅ. 6ರಂದು ರಿಲೀಸ್ ಆಗಲಿದೆ. ಇದರೊಂದಿಗೆ ವಿಜಯ್ ಆಂಟೋನಿ ಅವರ “ರಥಂ” ಸಿನಿಮಾ ಕೂಡ ಅ.6 ರಂದು ರಿಲೀಸ್ ಆಗಲಿದೆ.