Advertisement

National Award ರಂಗಕರ್ಮಿ ಆಗಬೇಕಾದವರು ಮೇಷ್ಟ್ರಾದರು

10:41 PM Aug 27, 2023 | Team Udayavani |

ಶಿರಸಿ: ಇಲ್ಲೊಂದು ಅಪರೂಪದ ವಿದ್ಯಮಾನ ನಡೆದಿದೆ. ಕನ್ನಡ ಭಾಷೆ ಕಲಿಸುವ ಪ್ರೌಢ ಶಾಲಾ ಶಿಕ್ಷಕರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದೆ. ಭಾಷಾ ಶಿಕ್ಷಕರಿಗೆ ರಾಷ್ಟ್ರ ಮಟ್ಟದ ಗೌರವ ಸಿಗುವದು ವಿರಳ. ಆದರೆ, ಈ ಪ್ರಶಸ್ತಿ ಶಿರಸಿ ಮಾರಿಕಾಂಬಾ ಪ್ರೌಢ ಶಾಲಾ ಭಾಷಾ ಶಿಕ್ಷಕ ನಾರಾಯಣ ಭಾಗವತ್ ಅವರಿಗೆ ಒಲಿದು ಬರಲು ಹಾಗೂ ರಂಗಭೂಮಿಗೂ ಅವಿನಾಭಾವ ಸಂಬಂಧ ಇಲ್ಲಿ ತಳಕು ಹಾಕಿಕೊಂಡಿದೆ!
ರಂಗಕರ್ಮಿ ಆಗಬೇಕಾದವರು ಉತ್ತಮ ಕನ್ನಡ ಭಾಷಾ ಮೇಷ್ಟ್ರಾಗಿದ್ದಕ್ಕೆ ಹಾಗೂ ಬಿಡದ ರಂಗಭೂಮಿ ನಂಟಿನ ಕಾರಣಕ್ಕೇ ಪ್ರಶಸ್ತಿ ಪಡೆಯುವಂಥಾದ ಭಾಗ್ಯ ಸಿಕ್ಕಿದ್ದು ನಾರಾಯಣ ಭಾಗವತ್ ಅವರಿಗೆ. ಬಿಡದ ರಂಗಭೂಮಿ, ಭಾಷಾ ಜ್ಞಾನ ವಿಸ್ತಾರದ ಕಾರ್ಯದ ಕಾರಣದಿಂದ ಮಲೆನಾಡಿಗೆ ರಾಷ್ಟ್ರ ಪ್ರಶಸ್ತಿಯನ್ನೇ ಕರೆತಂದಿದೆ!

Advertisement

ನಂಟೇ ಪ್ಲಸ್ ಆಯ್ತು!
ರಂಗಭೂಮಿಯ ಮೇಲಿನ ನಂಟು, ಆ ಮೂಲಕ ಮಾಡಿದ ಅನೇಕ ಪ್ರಯೋಗಗಳು, ವಿಜ್ಞಾನ ವಿಷಯದಲ್ಲೂ ನಾಟಕವನ್ನು ಮಕ್ಕಳಿಂದ ಆಡಿಸಿ ರಾಷ್ಟ್ರ ಮಟ್ಟದಲ್ಲೂ ಗುರುತಾಗಿದ್ದು, ಕೋವಿಡ್ ಕಾಲ ಘಟ್ಟದಲ್ಲಿ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿ ಪಾಠ ಮಾಡಿದ್ದು ಅವರಿಗೆ ಈ ಗೌರವ ಅರಸಿ ಬರಲು ಪುಷ್ಟಿ ನೀಡಿವೆ.

ಅನೇಕ ಕಡೆ ಸಂಪನ್ಮೂಲ ವ್ಯಕ್ತಿಯಾಗಿ, ಅನೇಕ ಹೊಸ ಹೊಸ ಪ್ರಯೋಗಗಳನ್ನು ಕಲಿಕೆಯಲ್ಲೂ ಮಾಡುತ್ತ, ಮಕ್ಕಳು ಪಠ್ಯೇತರವಾಗಿ ತೊಡಗಿಕೊಳ್ಳುವ ಜೊತೆಗೆ ಪಠ್ಯದಲ್ಲೂ ಸಾಧನೆ ಮಾಡುವಂತೆ ಪ್ರೇರೇಪಿಸುವ ಅವರ ಶಿಕ್ಷಣ ಪ್ರೀತಿ ಈ ಸಾಧನೆಗೆ ಮೈಲಿಗಲ್ಲಾಗಿದೆ.

ಹಳ್ಳಿಯಿಂದ ದಿಲ್ಲಿ ತನಕ
ನಾರಾಯಣ ಪಿ. ಭಾಗವತ್ ಹುಟ್ಟಿದ್ದು ಕುಮಟಾ ತಾಲೂಕಿನ ಹಂದಿಗೋಣ ಎಂಬ ಊರಿನಲ್ಲಿ. ಮೇ ೧೬ ,೧೯೬೮ ರಲ್ಲಿ ಜನಿಸಿದ ನಾರಾಯಣ ಪಿ. ಭಾಗವತ್ ಅವರು ಎಂ.ಎ., ಎಂ.ಇಡಿ. ಪದವೀಧರರಾಗಿದ್ದಾರೆ. ಹಂಪಿ ವಿವಿಯಿಂದ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ.

ಅವರ ಸಾಧನೆ ದೆಹಲಿ ತನಕ, ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಹೆಸರು ದಾಖಲಿಸುವ ತನಕದ ಶಿಕ್ಷಣ ಕ್ಷೇತ್ರದ33 ವರ್ಷಗಳ ಪಯಣ ಸಣ್ಣದಲ್ಲ. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಲೇ ಹೊಸತನಗಳಿಗೆ ಹುಡುಕಾಟ ನಡೆಸುತ್ತಿದ್ದ ಭಾಗವತ್ ಅವರಿಗೆ ಅವರ ಶೈಕ್ಷಣಿಕ ಹಾಗೂ ರಂಗಭೂಮಿ, ಸಾಹಿತ್ಯದ ತುಡಿತ ಸಾಧನೆಗೆ ಕಾರಣವಾಗಿದೆ.

Advertisement

ರಾಜ್ಯದಲ್ಲೇ ಅತಿ ಹೆಚ್ಚು ಪ್ರೌಢ ಶಾಲೆ ಓದುವ ಮಕ್ಕಳಿಗೆ ಪಾಠ ಮಾಡುತ್ತಿರುವ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡದ ಶಿಕ್ಷಕರಾಗಿರುವ ಅವರಿಗೆ ಮಾದರಿಯಾದ ಭಾಷಾ ಲ್ಯಾಬ್ ತಯಾರಿಸುವ ಕನಸೂ ಇದೆ.

ಒಂದು ಲಸಿಕೆಯ ಕಥೆ ಎಂಬ ವಿಜ್ಞಾನ ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಾಟಕ ಎಂಬ ಪ್ರಶಸ್ತಿ ಜೊತೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಕಳೆದ ವರ್ಷ ಮಾರಿಕಾಂಬಾ ಮಕ್ಕಳಿಗೇ ರಂಗ ತರಬೇತಿ ನೀಡಿದ್ದರು.

ಇವಿಷ್ಟೇ ಅಲ್ಲ
ಭಾಗವತ್ ಅವರಿಗೆ ಪಾಠ ಮಾಡುವದು, ರಂಗಭೂಮಿ ಮಾತ್ರ ಇಷ್ಟದ ಕ್ಷೇತ್ರವಲ್ಲ. ಕತೆ-ಕವನ-ನಾಟಕ ರಚನೆ , ಚಿತ್ರಕಲೆ , ಸಂಗೀತ , ನಾಟಕ ನಿರ್ದೇಶನ ಮತ್ತು ಅಭಿನಯ , ಉಪನ್ಯಾಸ , ರಜಾಶಿಬಿರಗಳ ಸಂಘಟನೆ , ಪೇಪರ್ ಕ್ರಾಫ್ಟ್ , ಹಾರ್ಮೋನಿಯಂ ವಾದನ , ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ, ಯಕ್ಷಗಾನ , ಕರಕುಶಲ ಕಲೆ , ವಾಸ್ತು ಜ್ಞಾನ ಕೂಡ ಹೊಂದಿದವರು. ಬಹುಮುಖಿ ಪ್ರತಿಭೆ ಉಳ್ಳವರು.

ಬಹುತ್ವದ ನೆಲೆಯಲ್ಲಿ ತೆರೆದುಕೊಂಡ ಇವರಿಗೆ ಜನಗಣತಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ನಟ, ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ , ನೇಶನ್ ಬ್ಯುಲ್ಡರ್ ಪ್ರಶಸ್ತಿ, ಕ.ಸಾ.ಪ. ತಾಲೂಕು ಪ್ರಶಸ್ತಿ, ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ನೂರಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ ಎಂಬುದು ಉಲ್ಲೇಖನೀಯ.

ರಾಷ್ಟ್ರೀಯ ಪ್ರಶಸ್ತಿಗೆ ನಾರಾಯಣ ಭಾಗವತ ಅತ್ಯಂತ ಅರ್ಹ ಹಾಗೂ ಸೂಕ್ತ ಶಿಕ್ಷಕರು. ಪಠ್ಯ – ಪಠ್ಯೇತರ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರ ಆಸಕ್ತಿ, ಗತಿ, ಸಿದ್ಧಿ ನಿಜಕ್ಕೂ ಶ್ಲಾಘನೀಯ. ಅವರನ್ನು ಅಭಿನಂದಿಸುವದೇ ನಮಗೆ ಅಭಿಮಾನ.
ಮೋಹನ ಭಾಸ್ಕರ ಹೆಗಡೆ
ಅಧ್ಯಕ್ಷರು, ಹವ್ಯಕ ಮಹಾ ಮಂಡಳ, ಸಿಇಓ ಸೆಲ್ಕೋ ಇಂಡಿಯಾ ಬೆಂಗಳೂರು

ರಾಷ್ಟ್ರ ಪ್ರಶಸ್ತಿ ಬಂದಿದ್ದಕ್ಕೆ ಅಪಾರ ಖುಷಿಯಾಗಿದೆ. ಮಾರಿಕಾಂಬಾ ಪ್ರೌಢಶಾಲೆಯ ಸಮಸ್ತ ವಿದ್ಯಾರ್ಥಿಗಳಿಗೆ, ಶಿಕ್ಷಕ ಬಂಧುಗಳಿಗೆ ಅರ್ಪಿಸುವೆ.
ನಾರಾಯಣ ಭಾಗವತ, ಪ್ರಶಸ್ತಿ ಪುರಸ್ಕೃತರು

ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗವತ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿರುವದು ಶಾಲೆಗೂ, ನಮ್ಮ ಕ್ಷೇತ್ರಕ್ಕೂ, ಜಿಲ್ಲೆಗೂ ಹೆಮ್ಮೆ. ಕನ್ನಡದ ಭಾಷಾ ಶಿಕ್ಷಕರೊಬ್ಬರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರುವದು ಕನ್ನಡಕ್ಕೂ ಖುಷಿ ಖುಷಿ. ಅಭಿನಂದನೆಗಳು.
ಭೀಮಣ್ಣ ನಾಯ್ಕ, ಶಾಸಕರು

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next