ಕೋಲ್ಕತಾ:ಕೆಲವು ತಿಂಗಳುಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಸಿನಿಮಾ ನಿರ್ದೇಶಕ ಬುದ್ಧದೇವ್ ದಾಸ್ ಗುಪ್ತಾ(77ವರ್ಷ) ಗುರುವಾರ (ಜೂನ್ 10) ಬೆಳಗ್ಗೆ ಹೃದಯ ಸ್ತಂಭನದಿಂದ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಾಳೆ ದಿಂಡಿನಲ್ಲಿವೆ ಆರೋಗ್ಯದ ಗುಟ್ಟು ..ಇದರಿಂದಾಗುವ ಪ್ರಯೋಜನಗಳೇನು ?
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಬುದ್ಧದೇಬ್ ಅವರು ಪತ್ನಿ ಹಾಗೂ ತಮ್ಮ ಮೊದಲ ಪತ್ನಿಯ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿರುವುದಾಗಿ ಮೂಲಗಳು ಹೇಳಿವೆ. ಕಾಳಿಕಾಪುರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ದಾಸ್ ಗುಪ್ತಾ ಅವರು ಹೃದಯ ಸ್ತಂಭನದಿಂದ ಚಲನರಹಿತರಾಗಿದ್ದಿದ್ದನ್ನು ಪತ್ನಿ ಸೋಹಿನಿ ಗಮನಿಸಿದ ನಂತರ ವಿಷಯ ತಿಳಿದು ಬಂದಿರುವುದಾಗಿ ಕುಟುಂಬದ ಮೂಲಗಳು ವಿವರಿಸಿವೆ.
ದಾಸ್ ಗುಪ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಚಿತ್ರ ನಿರ್ಮಾಪಕ ಗೌತಮ್ ಘೋಷ್ ಅವರು, ಬುದ್ಧಜೀ ಅವರು ಅನಾರೋಗ್ಯ ಪೀಡಿತರಾಗಿದ್ದರೂ ಸಹ ಚಲನಚಿತ್ರ ನಿರ್ಮಾಣ, ಲೇಖನ ಬರೆಯುವುದರ ಮೂಲಕ ಸಕ್ರಿಯರಾಗಿದ್ದರು. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಟೋಪೆ ಮತ್ತು ಉರೋಜಾಝ್ ಸಿನಿಮಾವನ್ನು ನಿರ್ದೇಶಿಸಿದ್ದರು. ಇವರ ನಿಧನ ತುಂಬಲಾರದ ನಷ್ಟ ಎಂದು ಘೋಷ್ ತಿಳಿಸಿದ್ದಾರೆ.
ಖ್ಯಾತ ನಿರ್ದೇಶಕರ ಗೆಳೆಯರು ಮತ್ತು ಕುಟಂಬ ವರ್ಗಕ್ಕೆ ಸಂತಾಪ ಸೂಚಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಬುದ್ಧದೇಬ್ ದಾಸ್ ಗುಪ್ತಾ ಅವರ ನಿಧನದಿಂದ ಬೇಸರವಾಗಿದೆ. ತಮ್ಮ ಅದ್ಭುತ ಕಾರ್ಯದ ಮೂಲಕ ಸಿನಿಮಾಕ್ಕೊಂದು ಹೊಸ ಭಾಷ್ಯ ಬರೆದಿದ್ದರು. ಅವರ ನಿಧನ ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.