Advertisement

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

11:23 PM Oct 21, 2020 | mahesh |

ಕುಂದಾಪುರ: ಹಾ.. ಆರಂಭಿಸಿ. ಕಟ್‌..ಕಟ್‌.! ಇದು ಚಿತ್ರ ನಿರ್ದೇಶಕರೊ ಬ್ಬರು ರಾಶಿ ರಾಶಿ ಡಬ್ಬಗಳ ಬಳಿ ಕುಳಿತು ಹೇಳುತ್ತಿರುವ ಮಾತು. ಹಾಗಂತ ಇದು ಚಿತ್ರೀಕರಣವಲ್ಲ. ಬದಲಾಗಿ ಗುಜರಿ ಅಂಗಡಿಯಲ್ಲಿನ ಅವರ ಬದುಕಿನ ನೈಜ ದೃಶ್ಯ.

Advertisement

ಗುಲ್ವಾಡಿ ಟಾಕೀಸ್‌ ನಿರ್ಮಾಣದ “ರಿಸರ್ವೇಶನ್‌’ ಚಿತ್ರಕ್ಕೆ ರಜತ ಕಮಲ ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಚಿತ್ರ ನಿರ್ಮಾಪಕ, ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡ “ಟ್ರಿಪಲ್‌ ತಲಾಖ್‌’ ಸಿನೆಮಾ ನಿರ್ದೇಶಕ ಯಾಕೂಬ್‌ ಖಾದರ್‌ ಗುಲ್ವಾಡಿ ಅವರು ಕೊರೊನಾ ಆರ್ಥಿಕ ಹಿನ್ನಡೆಯ ಕಾರಣದಿಂದ ಮತ್ತೆ ತಮ್ಮ ಹಳೆಯ ಕಸುಬನ್ನು ಪುನರಾರಂಭಿಸಿದ್ದಾರೆ.

ಹೀಗಿದೆ ಕಥೆ
ಕೊರೊನಾ ಸಾಕಷ್ಟು ನಷ್ಟ ಉಂಟು ಮಾಡಿದೆ. ಹಣಕಾಸಿನ ತೊಂದರೆ ನನ್ನನ್ನೂ ಚಿಂತೆಗೀಡುಮಾಡಿತು. ಬ್ಯಾರಿ ಭಾಷಾ ಚಲನ ಚಿತ್ರ “ಟ್ರಿಪಲ್‌ ತಲಾಖ್‌’ನ್ನು 57 ಜಾಗತಿಕ ಚಲನಚಿತ್ರೋತ್ಸವಗಳಿಗೆ ಕಳುಹಿ ಸಿದ್ದೆ. ಕೊರೊನಾದಿಂದ ಅನೇಕ ಚಿತ್ರೋತ್ಸವ ಗಳು ರದ್ದಾದವು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಅನ್‌ಸಂಗ್‌ ಇನ್‌ಕ್ರೆಡಿಬಲ್‌ ಇಂಡಿಯಾ’ ವಿಭಾಗದಲ್ಲಿ ಯಶಸ್ಸು ಕಂಡಿತು. ನನ್ನ ಸಿನೆಮಾ ಹುಚ್ಚಿಗಾಗಿ ಆದಾಯ ಬರುತ್ತಿದ್ದ ಅಂಗಡಿ ಮುಚ್ಚಿದ್ದೆ. ಈಗ ಮತ್ತೆ ಬದುಕು ಕಟ್ಟಿಕೊಳ್ಳಲು ಗೆಳೆಯನ ಸಹಕಾರದಿಂದ ಗುಲ್ವಾಡಿಯಲ್ಲೆ ಅಂಗಡಿ ತೆರೆದಿರುವೆ ಎನ್ನುತ್ತಾರೆ ಯಾಕೂಬ್‌.

ಗುಜರಿ ವ್ಯಾಪಾರದ ನಡುವೆ ಚಿಗುರಿದ ಆಸಕ್ತಿ
ಬಡತನದ ಕಾರಣದಿಂದ 6ನೇ ತರಗತಿ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ್ದ ಯಾಕೂಬ್‌ ಗುಜರಿ ಸಂಗ್ರಹಕ್ಕೆ ತೊಡಗಿದರು. ಅಲ್ಲಿ ಸಂಗ್ರಹವಾಗುತ್ತಿದ್ದ ಪುಸ್ತಕಗಳನ್ನೇ ಓದಿ,”ತರಂಗ’ ವಾರಪತ್ರಿಕೆಯ ಪ್ರೇರಣೆಯಿಂದ ಓದು, ಸಾಹಿತ್ಯ, ಬರಹದಲ್ಲಿ ತೊಡಗಿದರು. 25 ವರ್ಷ ಗುಜರಿ ಕಾಯಕ ಮಾಡಿದ್ದ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ರಾದರು, 4 ಪುಸ್ತಕಗಳನ್ನು ಬರೆದರು, ಗಿರೀಶ್‌ ಕಾಸರವಳ್ಳಿ ಅವರ “ಗುಲಾಬಿ ಟಾಕೀಸ್‌’ ಸಿನೆಮಾ ನಿರ್ಮಾಣದಲ್ಲಿ ಸಹಕರಿಸಿದ್ದರು. ಹತ್ತಾರು ಸಿನೆಮಾಗಳಲ್ಲಿ ಅಭಿನಯಿಸಿದರು. ಸಿನೆಮಾ ಕ್ಷೇತ್ರದ ಆಕರ್ಷಣೆ ಮತ್ತು ಹೆಚ್ಚು ಆದಾಯದ ನಿರೀಕ್ಷೆಯಿಂದ ಗುಜರಿ ವ್ಯಾಪಾರದಿಂದ ವಿಮುಖರಾಗಿದ್ದರು. ಈಗ ಮತ್ತೆ ಅದೇ ವ್ಯಾಪಾರ ಅವರ ಕೈ ಹಿಡಿದಿದೆ.

ನೆಮ್ಮದಿ ಇದೆ
ಕೊರೊನಾ ಎಲ್ಲರಿಗೂ ತೊಂದರೆ ಕೊಟ್ಟಂತೆ ನನಗೂ ಕೊಟ್ಟಿದೆ. ಬದುಕಿನ ಬಂಡಿ ಮತ್ತೆ “ಗುಜರಿ ಅಂಗಡಿ’ ಆಗಿದೆ. ದಿನ ತುಂಬಾ ಕೆಲಸ, ಒಳ್ಳೆಯ ನಿದ್ರೆ, ಸ್ವಲ್ಪ ಓದು-ಸಿನೆಮಾದ ಮೇಲಿನ ಆಸಕ್ತಿಯಿಂದ ನೆಮ್ಮದಿ ಸಿಗುತ್ತಿದೆ. ಆರ್ಥಿಕ ಹೊಡೆತ, ಬದುಕಿನ ಹಿನ್ನಡೆಗೆ ನುಗ್ಗಿ ನಡೆಯುವುದೇ ಪರಿಹಾರ.
ಯಾಕೂಬ್‌ ಖಾದರ್‌ , ಗುಲ್ವಾಡಿ

Advertisement

ಕೊರೊನಾ ತಂದಿತ್ತ ಸಂಕಷ್ಟವನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುತ್ತಿರುವವರ ಕುರಿತು ಈ ಅಂಕಣ. ನಿಮ್ಮ ಅಕ್ಕಪಕ್ಕದಲ್ಲಿ ಇಂಥವರಿದ್ದರೆ ನಮಗೆ ತಿಳಿಸಿ. ನಿಮಗೂ ತಿಳಿದಿದ್ದರೆ ಹೆಸರು, ಊರು, ಸಂಪರ್ಕ ಸಂಖ್ಯೆ ಅವರ ಕಳಿಸಿಕೊಡಿ. ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲೆಂದು ಈ ಮಾಲಿಕೆ . ವಾಟ್ಸ್‌ಆ್ಯಪ್‌ ಸಂಖ್ಯೆ:  7618774529

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next